ಮಡಿಕೇರಿ, ಸೆ. ೨೦ : ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಆಡಳಿತದ ಕಾರ್ಯಚಟುವಟಿಕೆಯ ವೇಗ ನೋಡಿ ಕಾಂಗ್ರೆಸ್ ಪಕ್ಷ ಗಲಿಬಿಲಿಗೊಂಡು ಆರೋಪ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ತಿರುಗೇಟು ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ನಗರಸಭಾ ಉಪಾಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರಸಭೆಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರ ಕೈಗೊಂಬೆ ಹಾಗೂ ಉಪಾಧ್ಯಕ್ಷರು ಇನ್ಯಾರದೋ ಕೈಗೊಂಬೆಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರು ಆರೋಪ ಮಾಡಿದ್ದಾರೆ. ಯಾರೂ ಕೂಡ ಯಾರ ಕೈಗೊಂಬೆಯಾಗಿಲ್ಲ ನಾವುಗಳು ಮತ ನೀಡಿದ ಜನತೆಯ ಕೈಗೊಂಬೆಗಳಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಆಡಳಿತ ಚೆನ್ನಾಗಿ ನಡೆಯುತ್ತಿದೆ. ಕಳೆದ ಏಪ್ರಿಲ್ ತಿಂಗಳಿನಿAದ ಅಧಿಕಾರಕ್ಕೆ ಬಂದ ನಂತರ ಎಲ್ಲ ವಾರ್ಡ್ಗಳಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಮೊದಲ ಸಭೆಯಲ್ಲಿಯೇ ರಸ್ತೆ ದುರಸ್ತಿ ಹಾಗೂ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಕರೆದು ಕ್ರಿಯಾ ಯೋಜನೆ ಕೂಡ ತಯಾರಿಸಲಾಗಿತ್ತು. ಗಿರೀಶ್ ಎಂಬ ಗುತ್ತಿಗೆದಾರರಿಗೆ ಗುತ್ತಿಗೆ ಕೂಡ ನೀಡಲಾಗಿತ್ತು. ಆದರೆ ಮಳೆಯ ಕಾರಣ ಕಾಮಗಾರಿ ಕೈಗೊಳ್ಳಲು ವಿಳಂಬವಾಯಿತು. ಆದರೆ ಕಾಂಗ್ರೆಸ್ ಮುಖಂಡರೋರ್ವರು ತಮ್ಮ ಕಾರಿನ ಚಾಲಕರ ಹೆಸರಿನಲ್ಲಿ ಎನ್‌ಡಿಆರ್‌ಎಫ್ ನಿಧಿಯಡಿ ೩೮ ಲಕ್ಷದಲ್ಲಿ ನಗರಸಭೆಯ ಗಮನಕ್ಕೆ ತಾರದೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾಗ ಕೆಲವು ಗುತ್ತಿಗೆದಾರರು ಕಚೇರಿಗೆ ಭೇಟಿ ನೀಡಿ ಕಾಮಗಾರಿ ವಿವರಣೆ ಕೇಳಿ ದೂರು ಅರ್ಜಿ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷರು ಕಾಮಗಾರಿಯನ್ನು ಸ್ಥಗಿತಗೊಳಿಸಿ ಟೆಂಡರ್ ಮುಖಾಂತರ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದಾರೆ; ಇದು ತಪ್ಪಾ ಎಂದು ಪ್ರಶ್ನಿಸಿದರು.

ಪಾರದರ್ಶಕವಾಗಿ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಬೇಕಿದ್ದರೂ, ಕಾಮಗಾರಿ ಸ್ಥಗಿತಗೊಳಿಸಿದ್ದರೂ ಇಂದು ರಾಜಾಸೀಟ್ ಬಳಿ ಕಾಮಗಾರಿ ನಡೆದಿದೆ. ಇದು ಯಾರ ಕುಮ್ಮಕ್ಕಿನಿಂದ ನಡೆಯುತ್ತಿದೆ ತಿಳಿಯುತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಬೇರೆ ರೀತಿಯಲ್ಲಿ ಬಣ್ಣ ಹಚ್ಚಿ ಅಪಪ್ರಚಾರ ನಡೆಸುತ್ತಿದೆ. ಚುನಾವಣೆಯಲ್ಲಿ ಒಂದು ಸ್ಥಾನ ಪಡೆದ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಹೆಚ್ಚಿಗೆ ಸ್ಥಾನ ಪಡೆಯಲು ಈ ರೀತಿ ಮಾಡುತ್ತಿದೆ. ಏನೇ ಮಾಡಿದರೂ ಕಾಂಗ್ರೆಸ್‌ಗೆ ಜನ ಮಣೆ ಹಾಕುವದಿಲ್ಲ ಎಂದು ಹೇಳಿದರು.

ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ; ಕಾಮಗಾರಿ ಗುತ್ತಿಗೆ ನೀಡುವ ಸಂದರ್ಭ ಗುತ್ತಿಗೆದಾರರ ಸಾಮರ್ಥ್ಯದ ಬಗ್ಗೆ ತಿಳಿದಿರಬೇಕಾಗುತ್ತದೆ. ನಗರಸಭಾ ಸದಸ್ಯರ ಚಾಲಕನಿಗೆ ಗುತ್ತಿಗೆ ನೀಡುವದೆಂದರೆ ಇದರಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ. ರಾಜಕೀಯಕ್ಕಾಗಿ ಬಿಜೆಪಿ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು. ಕಾಂಗ್ರೆಸ್‌ನ ನಗರಸಭಾ ಮಾಜಿ ಸದಸ್ಯರೋರ್ವರು ಮಡಿಕೇರಿಯಲ್ಲಿ ಸ್ನೂಕರ್ ಕ್ಲಬ್ ನಡೆಸುತ್ತಿದ್ದಾರೆ, ಕೆಲವರು ಶಾಸಕರ ಹೆಸರು ಹೇಳಿಕೊಂಡು ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ; ಬಿಜೆಪಿ ಮೇಲೆ ಆರೋಪ ಮಾಡುವ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ತಮ್ಮ ಹಿನ್ನೆಲೆಯನ್ನು ನೋಡಿಕೊಳ್ಳಬೇಕು. ಅವರಿಗೆ ಯಾವದೇ ನೈತಿಕತೆ ಇಲ್ಲ. ನಗರ ಸಭಾ ಸದಸ್ಯರುಗಳಾಗಿದ್ದುಕೊಂಡು ಜನತೆಗೆ ಅಗತ್ಯವಿರುವ ಕೆಲವು ದಾಖಲೆಗಳನ್ನು ಮಾಡಿಸಿಕೊಡುವದು ಸದಸ್ಯರ ಕರ್ತವ್ಯ. ಆದರೆ ಸದಸ್ಯರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲು ವಕ್ತಾರರಿಗೆ ನೈತಿಕತೆ ಇಲ್ಲ. ಕೆಲವರು ಶಾಸಕರ ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಾಮರ್ಥ್ಯವಿದ್ದರೆ ಮೈನಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಗೋಷ್ಠಿಯಲ್ಲಿ ನಗರಸಭಾಧ್ಯಕ್ಷೆ ಕಲಾವತಿ, ಸದಸ್ಯೆ ಸಬಿತಾ, ನಗರ ಬಿಜೆಪಿ ಉಪಾಧ್ಯಕ್ಷ ಮನು ಮಂಜುನಾಥ್ ಇದ್ದರು.