ಕಣಿವೆ, ಸೆ. ೨೦: ಕಳೆದ ಎರಡೂವರೆ ದಶಕಗಳಿಗೆ ಹೋಲಿಸಿದಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಅತ್ಯಧಿಕ ಪ್ರಮಾಣದ ಮಳೆ ಸುರಿದಿದೆ. ಮಳೆಗಾಲದ ಮಳೆಗೆ ಸಿಲುಕಿದ ೧೨೦ ದಿನಗಳ ಕಟಾವಿಗೆ ಒಳಪಡುವ ಮುಸುಕಿನ ಜೋಳ ಶೀತಕ್ಕೆ ಸಿಲುಕಿದ ಪರಿಣಾಮ ಇಳುವರಿ ಕುಂಠಿತವಾಗಿದೆ.ಅAದರೆ ಬೆಳೆ ಅಷ್ಟಾಗಿ ಈ ಬಾರಿ ನಮ್ಮ ಕೈ ಹಿಡಿಯಲಿಲ್ಲ ಎಂಬುದು ಕೃಷಿಕರ ಅಸಮಾಧಾನದ ನುಡಿ.
ಮಳೆಗಾಲದ ಮಳೆಯ ಶೀತಕ್ಕೆ ಸಿಲುಕಿದ ಜೋಳದ ಫಸಲು ಅಂತೂ ಇಂತೂ ಒಂದಷ್ಟು ರೈತನ ಕೈ ಸೇರಿದೆ. ಈಗ ಈ ಜೋಳದ ಫಸಲನ್ನು ಮಾರಾಟ ಮಾಡಲು ರೈತರು ಬಿಸಿಲಿಗೆ ಮಾರು ಹೋಗುತ್ತಿರುವುದು ಹಳ್ಳಿಗಾಡು ಪ್ರದೇಶಗಳಲ್ಲಿ ಎಲ್ಲೆಲ್ಲೂ ಕಂಡುಬರುತ್ತಿರುವ ಸಾಮಾನ್ಯ ಚಿತ್ರಣವಾಗಿದೆ.
ಕೆಲವು ಕೃಷಿಕರು ತಮ್ಮ ತಮ್ಮ ಮಹಡಿ ಮನೆಗಳ ಮೇಲ್ಛಾವಣಿಯ ಮೇಲೆ, ಕೆಲವರು ಹೆದ್ದಾರಿಯ ಬದಿಗಳಲ್ಲಿ, ಇನ್ನೂ ಕೆಲವರು ಬಿಸಿಲು ಬರುವಲ್ಲಿ ಟಾರ್ಪಲ್ ಹಾಸಿ ಒಣಗಿಸಿ ಮಾರಾಟ ಮಾಡುತ್ತಿದ್ದಾರೆ. ೧೦೦ ಕೆಜಿ ತೂಕದ ಒಣಗಿದ ಜೋಳಕ್ಕೆ ಮಾರುಕಟ್ಟೆಯಲ್ಲಿ ಈಗ ೨,೨೦೦ ರೂ. ದೊರಕುತ್ತಿದೆ. ಜೋಳದ ಹೊಲದಿಂದಲೇ ಯಂತ್ರಗಳ ಮೂಲಕ ಕಟಾವು ಮಾಡಿ ಜೋಳ ಬಿಡಿಸಿ ಒಯ್ಯುವ ಜೋಳಕ್ಕೆ ಕ್ವಿಂಟಾಲ್ ಗೆ ೧,೬೦೦ ರಿಂದ ೧,೭೦೦ ರೂ. ವರೆಗೂ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ.
ರೈತರ ಪಾಲಿಗೆ ಕಡಿಮೆ ಖರ್ಚಿನ ಒಂದಷ್ಟು ಸೀಮಿತ ಆದಾಯ ತರಬಲ್ಲ ಈ ಜೋಳ ಈ ಬಾರಿ ಹೆಚ್ಚು ಮಳೆಯ ಪರಿಣಾಮ ಬಹಳಷ್ಟು ರೈತರಿಗೆ ಲಾಭ ಇರಲಿ, ಮಾಡಿದ ಖರ್ಚು ಕೂಡ ಸಿಗದೇ ಕೈಯಿಂದಲೇ ಕಳೆದುಕೊಂಡಿದ್ದೇವೆ ಎನ್ನುತ್ತಾರೆ ಚಿಕ್ಕತ್ತೂರಿನ ಕೃಷಿಕ ಪುರುಷೋತ್ತಮ.
ಒಟ್ಟಾರೆ ಈ ಬಾರಿ ಶುಂಠಿಗೂ ಬೆಲೆ ಇಲ್ಲ. ಜೋಳಕ್ಕೂ ಬೆಲೆ ಕಡಿಮೆ.ಅಗತ್ಯಕ್ಕಿಂತ ಹೆಚ್ಚು ಸುರಿದ ಮಳೆ ಅನ್ನದಾತನನ್ನು ಹಿಂಡಿ ಸಿಪ್ಪೆ ಮಾಡಿಬಿಟ್ಟಿದೆ ಎಂಬ ಅಳಲು ರೈತರದ್ದು.