ಸೋಮವಾರಪೇಟೆ, ಸೆ.೨೩: ತಾಲೂಕಿನ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೪೯ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಈ. ಜಯೇಂದ್ರ ಹೇಳಿದರು.

ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಘವು ರೂ. ೨೭ ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ರೂ. ೪೯ ಲಕ್ಷ ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಒಟ್ಟು ರೂ. ೨೭ ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಇದರಲ್ಲಿ ಕೆಸಿಸಿ ಸಾಲ ರೂ. ೧೮.೬೨ ಕೋಟಿ ನೀಡಲಾಗಿದೆ. ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತಾಪಿ ವರ್ಗದ ಅನುಕೂಲತೆಗಾಗಿ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದೆ. ಸದಸ್ಯರು ಮಹಾ ಸಭೆಗಳಿಗೆ ನಿರಂತರ ಗೈರಾದರೆ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಆ ಮೂಲಕ ಸರ್ಕಾರದ ಸೌಲಭ್ಯ, ಸಹಾಯಧನದ ಅವಕಾಶದಿಂದಲೂ ವಂಚಿತರಾಗುತ್ತಾರೆ. ಈ ಹಿನ್ನೆಲೆ ವಾರ್ಷಿಕ ಸಭೆಗಳಿಗೆ ಹಾಜರಾಗಿ ಚರ್ಚೆ ನಡೆಸಬೇಕೆಂದರು.

ಸAಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೋಯಪ್ಪ ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸದಸ್ಯರುಗಳಾದ ರಾಮಚಂದ್ರ, ಡಾಲಿ ಪ್ರಕಾಶ್, ಸಂಪತ್, ರಾಜಪ್ಪ, ಕೆ.ಎಂ. ಲೋಕೇಶ್, ಕೆ.ಟಿ. ರಾಜಶೇಖರ, ಎಸ್.ಜಿ. ಮೇದಪ್ಪ ಸೇರಿದಂತೆ ಇತರರು ಚರ್ಚೆಯಲ್ಲಿ ಭಾಗಿಯಾದರು. ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರುಗಳ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ತಲ್ತರೆಶೆಟ್ಟಳ್ಳಿಯ ವರ್ಣಿಕ ಗೌಡ, ಕುಡಿಗಾಣ ಗ್ರಾಮದ ಎಂ.ಎಸ್. ವಿಷ್ಣು ನಂದೀಶ್, ಬೆಟ್ಟದಳ್ಳಿಯ ಜಸ್ವಿನ್ ಶ್ರೀವತ್ಸ, ಹರಗದ ಶಶಾಂಕ್ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಪಿ. ಕುಮಾರ್, ನಿರ್ದೇಶಕರಾದ ಬಿ.ಎ. ಧರ್ಮಪ್ಪ, ಜಿ.ಹೆಚ್. ರಾಜೇಶ್, ಯು.ಆರ್. ಬಸವರಾಜ್, ಪಿ.ಎಸ್. ಅರುಣ್, ಡಿ.ಎಸ್. ಲಿಂಗರಾಜು, ಕೆ.ಆರ್. ಶಿವಕುಮಾರ್, ಹೆಚ್.ಕೆ. ತ್ರಿಶೂಲ್, ಬಿ.ಟಿ. ಪರಮೇಶ್, ಎಂ.ಎಸ್. ನಿಶಾಂತ್, ಕೆ.ಕೆ. ಚಂದ್ರಾವತಿ, ಎಂ.ಜೆ. ಪ್ರಕಾಶ್ ಅವರುಗಳು ಉಪಸ್ಥಿತರಿದ್ದರು.