ಮಡಿಕೇರಿ, ಸೆ. ೨೩: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಪಟ್ಟಿಯಲ್ಲಿ ಹಿಂದೂ ಧರ್ಮಗಳ ಜೊತೆ ಅನ್ಯಧರ್ಮದ ಹೆಸರನ್ನು ಜೋಡಿಸಿರುವುದನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಘೋಷಣೆ ಕೂಗಿದ ಕಾರ್ಯಕರ್ತರು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಯ ಹೆಸರಲ್ಲಿ ಹೊಸ ಜಾತಿಗಳನ್ನು ಸೃಷ್ಟಿಸಿ ಗೊಂದಲ ಮೂಡಿಸುತ್ತಿದೆ. ಅನ್ಯ ಧರ್ಮವನ್ನು ಹಿಂದೂ ಜೊತೆ ಸೇರಿಸುವ ಕೆಲಸಕ್ಕೆ ಕೈ ಹಾಕಿರುವುದು ಖಂಡನೀಯ. ಕರ್ನಾಟಕದಲ್ಲಿ ಜಾರಿಯಲ್ಲಿರುವ ಮತಾಂತರ ನಿರ್ಬಂಧ ಕಾಯ್ದೆಯನ್ನು ಸರ್ಕಾರವೇ ದುರ್ಬಲಗೊಳಿಸುತ್ತಿದೆ. ದಲಿತರೂ, ಒಬಿಸಿಯವರೂ ಸೇರಿದಂತೆ ಹಿಂದು ಜಾತಿಗಳನ್ನು ಒಡೆಯುವುದೇ ಅಹಿಂದ ರಾಜಕಾರಣದ ನೀತಿಯಾಗಿದೆ ಎಂದು ಪ್ರಮುಖರು ಆರೋಪಿಸಿದರು. ಕಾಂತರಾಜು ಆಯೋಗ, ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರ ಸಾಮಾಜಿಕ ನ್ಯಾಯದ ವಿಷಯವನ್ನು ಮತ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಸರ್ಕಾರ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಎಲ್ಲ ಜಾತಿ, ಸಮುದಾಯದವರು ಅಕ್ಷೇಪ ದಾಖಲಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷದ ವಿರುದ್ಧ ಜನಾಕ್ರೋಶ ಸ್ಫೋಟಿಸುವ ದಿನ ದೂರವಿಲ್ಲ ಎಂದು ದೂರಿದರು.
ಬೇರೆ ಧರ್ಮದ ಟ್ಯಾಗ್ನಲ್ಲಿದ್ದ ೩೩ ಜಾತಿಗಳ ಬಗ್ಗೆ ಮಾತ್ರ ಆಯೋಗ ಸ್ಪಷ್ಟನೆ ನೀಡಿದ್ದು, ಉಳಿದ ೧೩ ಜಾತಿಗಳ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಚಂದ್ರ ಉಡೋತ್ ಮಾತನಾಡಿ ಸರಕಾರದ ನಡೆಯನ್ನು ಖಂಡಿಸಿದರು. ಬಳಿಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕುಮಾರ್, ಭವನ್, ಶರತ್, ಮಡಿಕೇರಿ ತಾಲೂಕು ಸಂಯೋಜಕ ಅಪ್ಪು ರೈ, ವೀರಾಜಪೇಟೆ ತಾಲೂಕು ಸಂಯೋಜಕ ಅನಿಲ್, ಸೋಮವಾರಪೇಟೆ ತಾಲೂಕು ಸಂಯೋಜಕ ಉಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಮುಖರಾದ ಶಾಂತೆಯAಡ ರವಿ ಕುಶಾಲಪ್ಪ, ಕೆ.ಎಸ್. ರಮೇಶ್, ಎಸ್.ಸಿ. ಸತೀಶ್, ಕವನ್ ಕಾವೇರಪ್ಪ, ಇತರರು ಇದ್ದರು.