ಶನಿವಾರಸಂತೆ, ಸೆ. ೨೩: ಸಹಕಾರಿ ಸದಸ್ಯರು ಸಕಾಲದಲ್ಲಿ ಸಂಘದಲ್ಲಿ ಮಾಡಿರುವ ಸಾಲವನ್ನು ಮರು ಪಾವತಿಸುವುದು ಮತ್ತು ಸಂಘದ ಬೆಳವಣಿಗೆಗೆ ಸಹಕರಿಸುವುದರಿಂದ ಸಂಘವು ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ್ ಅಭಿಪ್ರಾಯಪಟ್ಟರು.
ಅವರು ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಬೆಳವಣಿಗೆಯಲ್ಲಿ ಸಹಕಾರಿ ಸದಸ್ಯರ ಸಹಕಾರ ಪ್ರಮುಖವಾದದ್ದು.
ಸಂಘದಲ್ಲಿ ಮಾಡಿರುವ ಸಾಲವನ್ನು ಮರು ಪಾವತಿಸಿ ಸಹಕರಿಸಬೇಕು ಮತ್ತು ಸಂಘದಲ್ಲಿ ಕೃಷಿ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಸಂಘದ ನಿಯಮದಂತೆ ತಮ್ಮ ಜಮೀನಿನ ಪಹಣಿ ಪತ್ರದಲ್ಲಿ ವ್ಯತ್ಯಾಸವಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ಸಂಘದಲ್ಲಿ ಸಾಲ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸಂಘವು ಈ ಸಾಲಿನಲ್ಲಿ ರೂ. ೧೩ ಲಕ್ಷದ ೨೯ ಸಾವಿರದ ೭೭೩ ನಿವ್ವಳ ಲಾಭಗಳಿಸಿದೆ. ಈ ಮೂಲಕ ಕಳೆದ ಸಾಲಿಗಿಂತ ಹೆಚ್ಚಿನ ಲಾಭಗಳಿಸಿದ್ದು ಮುಂದಿನ ಸಾಲಿನಲ್ಲಿ ಮತ್ತಷ್ಟು ಲಾಭ ತಂದುಕೊಡಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸಪ್ಪ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸುತ್ತಾ, ಸಂಘದಲ್ಲಿ ೧೪೯೭ ಮಂದಿ ಸದಸ್ಯರಿದ್ದು ಸದಸ್ಯರ ‘ಎ’ ತರಗತಿಯ ಪಾಲು ಹಣ ರೂ. ೧ ಕೋಟಿ ೬೬ ಲಕ್ಷದ ೪೧ ಸಾವಿರದ ೨೦೭ ಇರುತ್ತದೆ ಸಂಘವು ೨೦೨೪-೨೫ನೇ ಸಾಲಿನಲ್ಲಿ ಕೆ.ಡಿ.ಸಿ.ಸಿ ಬ್ಯಾಂಕಿನಲ್ಲಿ ರೂ. ೧೩ ಕೋಟಿ ೬೫ ಲಕ್ಷ ೧೯ ಸಾವಿರದ ೯೪೦ ಸಾಲ ಪಡೆಯಲಾಗಿದ್ದು, ಈ ಮೂಲಕ ಸಂಘದ ೭೬೦ ಸದಸ್ಯರಿಗೆ ಈ ಸಾಲಿನಲ್ಲಿ ರೂ. ೧೪ ಕೋಟಿ ೮೨ ಲಕ್ಷದ ೨೬ ಸಾವಿರದ ೫೩೮ ಕೆ.ಸಿ.ಸಿ ಸಾಲವನ್ನು, ೯ ಸದಸ್ಯರಿಗೆ ಆಭರಣ ಸಾಲ ರೂ. ೧೦,೧೩,೧೦೦ ಹಾಗೂ ಸಂಘದ ನೌಕರ ವರ್ಗದವರಿಗೆ ಸಾಲ ನೀಡಲಾಗಿದೆ ಎಂದರು.
ಸAಘದ ಬೆಳವಣಿಗೆ ಮತ್ತು ಸಹಕಾರಿ ಸದಸ್ಯರಿಗೆ ಉಪಯೋಗಕ್ಕೆ ಪೂರಕವಾಗಿ ಚರ್ಚಿಸಲಾಯಿತು. ಸಂಘದ ಹಿರಿಯ ಸಹಕಾರಿ ಸದಸ್ಯರಾದ ಎಸ್. ಕೆ ವೀರಪ್ಪ, ವಿನುತ್ ಶಂಕರ್, ರವಿ ಕುಮಾರ್, ನಿರಂಜನ್, ಶಿವಪ್ಪ, ಕೆ.ವಿ. ಮಂಜುನಾಥ್, ಶಿವಾನಂದ್, ಬಸವರಾಜ್. ನಂಜಪ್ಪ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಾಂತ್ರಾಜ್ ಮುಂತಾದ ಸಹಕಾರಿಗಳು ಸಭೆಯಲ್ಲಿ ಚರ್ಚಿಸಿದರು
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಯಶವಂತ ಮತ್ತು ಆಡಳಿತ ಮಂಡಳಿಯ ನಿರ್ದೇಶಕರಾದ ವೀರೇಂದ್ರ ಕುಮಾರ್, ಸಂದೀಪ್, ಮದು, ರಮೇಶ್, ವಿಶಾಲಾಕ್ಷಿ, ಕೆ.ಎನ್. ಮದುರ, ಮೋಹನ್, ರವೀಶ್, ದೇವರಾಜು, ಕೆಡಿಸಿಸಿ ಬ್ಯಾಂಕ್ ಪರ ಮೇಲ್ವಿಚಾರಕರಾದ ಆರ್. ಅನುರಾಧಾ, ಸಂಘದ ಹಿರಿಯ ಗುಮಾಸ್ತೆ ಶೋಭಾ, ಕಿರಿಯ ಗುಮಾಸ್ತ ಹುಸೈನಾರ್, ಮಾರಾಟ ಗುಮಾಸ್ತ ಕೆ.ಎಸ್. ಸಂತೋಷ್, ಸೋಮಶೇಖರ್ ಮುಂತಾದವರು ಹಾಜರಿದ್ದರು.