ಸೋಮವಾರಪೇಟೆ, ಸೆ. ೨೩: ತಾಲೂಕು ರೈತ ಹೋರಾಟ ಸಮಿತಿ ಹಾಗೂ ರೈತ ಸಂಘದ ನೇತೃತ್ವದಲ್ಲಿ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪ್ರಮುಖವಾಗಿ ೩ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ತಾ. ೨೫ ರಂದು ತಹಶೀಲ್ದಾರ್ ನೇತೃತ್ವದಲ್ಲಿ ನಡೆಯುವ ರೈತರ ಕುಂದು ಕೊರತೆ ಸಭೆಗೆ ಆಯಾ ಗ್ರಾಮದ ದಾಖಲಾತಿಯೊಂದಿಗೆ ಎಲ್ಲಾ ರೈತರು ಸಭೆಯಲ್ಲಿ ಭಾಗವಹಿಸುವಂತೆ ತೀರ್ಮಾನಿಸಲಾಯಿತು.

ಮುಕ್ಕೋಡ್ಲು ಗ್ರಾಮದ ಕೃಷಿಕ ನಾಣಿಯಪ್ಪ ಅವರ ಕೃಷಿ ಫಸಲು ನಾಶ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ತಾ. ೨೬ರಂದು ಮಡಿಕೇರಿ ಅರಣ್ಯ ಭವನದ ಮುಂದೆ ನಡೆಯುವ ಪ್ರತಿಭಟನೆಯಲ್ಲಿ ತಪ್ಪದೇ ಭಾಗಿಯಾಗಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.

ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರವು ಎಸ್.ಐ.ಟಿ. ರಚನೆ ಮಾಡಿದ್ದು, ಈ ತನಿಖೆಯಲ್ಲಿ ರೈತರು ಉಳುಮೆ ಮಾಡಿಕೊಂಡಿರುವ ಜಾಗವನ್ನು ಕೈಬಿಡುವಂತೆ, ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಮಟ್ಟದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ತಾಲೂಕು ರೈತ ಸಂಘದ ಅದ್ಯಕ್ಷ ದಿನೇಶ್, ಸಮಿತಿ ಕಾರ್ಯದರ್ಶಿ ಕೂತಿ ದಿವಾಕರ್ ಸೇರಿದಂತೆ ಗ್ರಾಮ ಸಮಿತಿ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.