ಮಡಿಕೇರಿ, ಸೆ. ೨೪ : ಪರಿಸರ ನಾಶ, ಮರಕಡಿತ ಪ್ರದೇಶಗಳಿಂದ ಉತ್ಪಾದನೆ ಆಗುವ ವಸ್ತುಗಳನ್ನು ಬಳಸದೆ, ಪರಿಸರಕ್ಕೆ ಪೂರಕವಾಗಿರುವ ಪ್ರದೇಶಗಳಿಂದ ಮಾತ್ರ ಕಾಫಿ ಆಮದು ಮಾಡುವ ಉದ್ದೇಶದಿಂದ ಯೂರೋಪಿಯನ್ ಯೂನಿಯನ್‌ನ ‘ಡೀಫಾರೆಸ್ಟೇಷನ್ ನಿಯಮ‘ ಅನುಷ್ಠಾನಕ್ಕೆ ತರಲಾಗಿದೆ. ಈ ನಿಯಮ ಪ್ರಕಾರ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಪ್ರದೇಶಗಳಿಂದ, ಯೂರೋಪ್ ಯೂನಿಯನ್, ಕಾಫಿಯನ್ನು ಖರೀದಿಸುವುದಿಲ್ಲ ಎಂಬುದಾಗಿ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರು ಮಾಹಿತಿ ನೀಡಿದರು.

ಮಡಿಕೇರಿಯಲ್ಲಿ ೨ನೇ ವರ್ಷದ ಕಾಫಿ ದಸರಾ ಪ್ರಯಕ್ತ ಗಾಂಧಿ ಮೈದಾನದಲ್ಲಿನ ಕರ್ನಾಟಕದ ಕಾಫಿಯ ಮೊದಲ ಮಹಿಳಾ ಉದ್ಯಮಿ ದಿ.ಸಾಕಮ್ಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ನಿಯಮ ಪ್ರಕಾರ ಕಾಫಿಯನ್ನು ಯೂರೋಪ್‌ಗೆ ರಫ್ತು ಮಾಡಲು ಉದ್ದೇಶಿಸಿರುವವರು ತಮ್ಮ ತೋಟಗಳಲ್ಲಿ ಮರಗಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳುವುದು ಅಗತ್ಯ. ರಫ್ತಾಗುವ ಕಾಫಿಯು ಯಾವ ತೋಟದಿಂದ ಬಂದಿದೆ ಎಂಬುದನ್ನು ಅಲ್ಲಿನ ಆಮದುದಾರರು ತಿಳಿದುಕೊಳ್ಳುತ್ತಿದ್ದಾರೆ. ತೋಟಗಳಲ್ಲಿ ಮರಗಳ ಸಂಖ್ಯೆ ಕಡಿಮೆ ಮಾಡಿದರೆ ಯೂರೋಪ್‌ಗೆ ಕಾಫಿ ರಫ್ತಾಗುವುದು ಅಸಾಧ್ಯ ಎಂಬ ಆತಂಕದ ವಿಷಯದ ಬಗ್ಗೆ ಬೆಳಕು ಚೆಲ್ಲಿದರು.

ಈ ನಿಟ್ಟಿನಲ್ಲಿ ಕಾಫಿ ಮಂಡಳಿಯಿAದ ತಯಾರಾದ ‘ಇಂಡಿಯಾ ಕಾಫಿ’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿ ತೋಟಗಳ ಬೌಂಡರಿ ಗುರುತನ್ನು ಬೆಳೆಗಾರರೇ ಮಾಡಬಹುದು. ಇಸ್ರೋ ಇನ್‌ಸ್ಯಾಟ್ ಉಪಗ್ರಹದ ಮೂಲಕ, ಆ್ಯಪ್‌ನಲ್ಲಿ ಗುರುತಾಗಿ ನೋಂದಣಿಯಾಗಿರುವ ತಮ್ಮ ತೋಟದಲ್ಲಿ ಮರಗಳ ಸಂಖ್ಯೆ ಕಡಿಮೆ ಆಗಿದೆಯಾ ಎಂದು ಪತ್ತೆ ಮಾಡಲಾಗುವುದು. ಆಗದಿದ್ದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ರಫ್ತು ಸಾಧ್ಯವಾಗುತ್ತದೆ ಎಂದರು.

ಎಫ್.ಪಿ.ಒ (ಫಾರ್ಮರ್ಸ್ ಪ್ರೊಡ್ಯೂಸರ್ಸ್ ಆರ್ಗನೈಸೇಷನ್) ಹಾಗೂ ಕೊಡಗಿನ ಹೋಮ್‌ಸ್ಟೇಗಳ ಮೂಲಕ ಕಾಫಿ ಉತ್ಪಾದನೆ ಹಾಗೂ ಮಾರುಕಟ್ಟೆ ಮೌಲ್ಯ ಹೆಚ್ಚಿಸಬಹುದಾಗಿದ್ದು, ಎಫ್.ಪಿ.ಒ ತರಬೇತಿ ಕೇಂದ್ರವನ್ನು ಕೊಡಗು ವಿ.ವಿಯಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ಈ ಸಂದರ್ಭ ಅವರು ಮಾಹಿತಿ ಇತ್ತರು. ೪ಐದನೇ ಪುಟಕ್ಕೆ ಕಾಫಿ ಮಾರುಕಟ್ಟೆಗೆ ಇರುವ ಬೆಂಬಲ ಉತ್ತಮವಾಗಿದೆ. ಯುವಕರು ಹೆಚ್ಚಾಗಿ ಈ ಉದ್ಯಮಕ್ಕೆ ಬರುತ್ತಿದ್ದಾರೆ. ತಾಂತ್ರಿಕತೆ ಹೆಚ್ಚಾಗಿ ಬಳಕೆ ಆಗುತ್ತಿದೆ. ಇಂತಹ ಸಮಾರಂಭಗಳು ಇವಕ್ಕೆ ಸಹಕಾರಿ ಎಂದರು. ಕೊಡಗಿನಲ್ಲಿ ಶೇ.೯೫ ರಷ್ಟು ಸಣ್ಣ ಬೆಳೆಗಾರರಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಭವಿಷ್ಯದಲ್ಲಿ ಭಾರತದಲ್ಲಿ ವಾರ್ಷಿಕ ೭ ಲಕ್ಷ ಟನ್ ಕಾಫಿ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.

ರಾಜಕೀಯ ರಹಿತವಾಗಿ ಬೆಳೆಗಾರರ ಸಮಸ್ಯೆ ಬಗೆಹರಿಯಲಿ- ಮಂತರ್

ಕೊಡಗಿನಲ್ಲಿನ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ರಾಜಕೀಯ ರಹಿತವಾಗಿ ಎಲ್ಲರೂ ಒಟ್ಟುಗೂಡಿ ಪ್ರಯತ್ನ ನಡೆಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಹೇಳಿದರು. ಕಾಫಿಗೆ ದರ ಅತ್ಯುತ್ತಮವಾಗಿದ್ದರೂ ಬೆಳೆಗಾರರ ಸಮಸ್ಯೆಗಳು ಹಲವಾರಿವೆ. ಹವಾಮಾನ, ವನ್ಯಪ್ರಾಣಿಗಳು ಸೇರಿದಂತೆ ಇತರ ಸಮಸ್ಯೆಗಳನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ರಾಜಕೀಯ ರಹಿತವಾಗಿ ಬಗೆಹರಿಸುವಂತಾಗಬೇಕೆAದು ಅವರು ಆಶಿಸಿದರು. ಕಾಫಿ ಬೆಳೆ ಉತ್ತೇಜನಕ್ಕೆ ಇರುವ ಹತ್ತು ಹಲವಾರು ಸಂಘ-ಸAಸ್ಥೆಗಳು ಈ ನಿಟ್ಟಿನಲ್ಲಿ ಕಂದಾಯ, ಅರಣ್ಯ ಇಲಾಖೆಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಯುವಿಕೆಗೆ ಪ್ರಯತ್ನ ಪಡಬೇಕೆಂದರು.

ಕಾಫಿ ದಸರಾಗೆ ಉತ್ತಮ ಪ್ರತಿಕ್ರಿಯೆ ಇದೆ. ಮುಂದಿನ ವರ್ಷ ಕಾಫಿ ದಸರಾ ೨ ದಿನಗಳ ಕಾಲ ನಡೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಸ್ಸಾಮ್ ಹಾಗೂ ಹೊರ ದೇಶದ ಕಾರ್ಮಿಕರ ಸಮಸ್ಯೆ ಕೂಡ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೊತೆ ಚರ್ಚೆ ನಡೆದು ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ೨ನೇ ವರ್ಷ ಕಾಫಿ ದಸರಾ ಆಯೋಜನೆ ಆಗುತ್ತಿದ್ದು, ಕಾಫಿ ದಸರಾ ಮೂಲಕ ಬೆಳೆಗಾರರು, ಮಾರಾಟಗಾರರಿಗೆ ಸಹಕಾರಿಯಾಗಿದೆ. ಇದೊಂದು ಉತ್ಸವದ ರೀತಿಯಲ್ಲಿ ಆಚರಣೆ ಮಾಡಬೇಕು. ಸಮಸ್ಯೆಗಳನ್ನು ಬಗೆಹರಿಸಲು ಸಂಘ ಸಂಸ್ಥೆಗಳು, ಬೆಳೆಗಾರರು ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು. ತಿಂಗಳಿಗೆ ಒಂದು ಬಾರಿ ಆದರೂ ಕಾಫಿ ಸಂಬAಧಿತ ಸಮಸ್ಯೆ ಬಗ್ಗೆ ಚರ್ಚೆ ಆಗಬೇಕು. ಜಿಲ್ಲಾಡಳಿತ, ಕಾಫಿ ಬೋರ್ಡ್ ವರ್ಚುವಲ್ ಮೀಟಿಂಗ್ ಆದರೂ ಮಾಡುವಂತಾಗಬೇಕೆAದರು. ಕಾಫಿಯಲ್ಲಿ ದೇಶಕ್ಕೆ ಕೊಡಗು ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಕೊಡಗು ಕಾಫಿ ಹೆಚ್ಚಿನ ಪ್ರಸಿದ್ಧತೆ ಪಡೆಯುವಂತಾಗಬೇಕೆAದರು.

ಕಾರ್ಯಕ್ರಮದ ಸಂಚಾಲಕ ಹೆಚ್.ಟಿ ಅನಿಲ್ ಅವರು ಮಾತನಾಡಿ, ಕಾಫಿ ದಸರಾಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಳಿಗೆಗಳು ಭಾಗವಹಿಸಿವೆ. ಕಳೆದ ಬಾರಿ ೩೬ ಮಳಿಗೆಗಳಿದ್ದು ಈ ಬಾರಿ ೪೫ ಮಳಿಗೆಗಳು ಕಾಫಿ ದಸರಾದಲ್ಲಿ ಭಾಗವಹಿಸಿ ಕಾಫಿ ದಸರಾಗೆ ಮೆರುಗು ನೀಡಿವೆ ಎಂದರು. ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಾಸ್ತಿ, ನಗರಸಭಾ ಅಧ್ಯಕ್ಷರಾದ ಕಲಾವತಿ, ದಸರಾ ಕಾರ್ಯಾಧ್ಯಕ್ಷರಾದ ಬಿ.ಕೆ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ನಂದಾ ಬೆಳ್ಯಪ್ಪ, ಮೂಡಾ ಅಧ್ಯಕ್ಷ ಬಿ.ವೈ ರಾಜೇಶ್, ಪ್ರಮುಖರಾದ ಜ್ಯೋತಿಕಾ ಬೋಪಣ್ಣ, ಮಾಜಿ ಸಚಿವ ಎಂ.ಸಿ ನಾಣಯ್ಯ, ಬೆಳೆಗಾರರಾದ ಬೋಸ್ ಮಂದಣ್ಣ, ಕೊಡಗು ವಿ.ವಿ ಕುಲಪತಿ ಅಶೋಕ ಸಂಗಪ್ಪ, ಪೌರಾಯುಕ್ತ ರಮೇಶ್ ಹಾಗೂ ಇತರ ಗಣ್ಯರು ಹಾಜರಿದ್ದರು. ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು, ಸಪ್ನ ಮಧುಕರ್ ಕಾಫಿ ಗೀತೆ ಹಾಡಿದರು.

ಬೆಂಗಳೂರು ಕಾಫಿ ಮಂಡಳಿಯ ಕಾಫಿ ಗುಣಮಟ್ಟ ವಿಭಾಗದ ನಿರ್ದೇಶಕರಾದ ಐಚೆಟ್ಟೀರ ಡಾ.ಮಂದಪ್ಪ, ಮೂಡಿಗೆರೆಯ ಕಾಫಿ ಕೃಷಿ ಪರಿಣಿತರಾದ ಕರಣ್, ಕುಶಾಲನಗರದ ಜೆರ್ಮಿ ಡಿಸೋಜಾ ಹಾಗೂ ಮಡಿಕೇರಿ ಪಶುವೈದ್ಯಕೀಯ ಆಸ್ಪತ್ರೆಯ ಡಾ.ಚೇಂದ್ರಿಮಾಡ ಕ್ಯಾಪ್ಟನ್ ತಿಮ್ಮಯ್ಯ ಅವರುಗಳು ಕಾಫಿ ಸಂಬAಧಿತ ಉಪನ್ಯಾಸ ನೀಡಿದರು.