ನಾಪೋಕ್ಲು, ಸೆ. ೨೪: ಇಲ್ಲಿಗೆ ಸಮೀಪದ ಬಲಮುರಿ ಶ್ರೀ ಮಹಾದೇವ ಸ್ಪೋರ್ಟ್ಸ್ ಕ್ಲಬ್ ಇದರ ೭೩ನೇ ವಾರ್ಷಿಕ ಮಹಾಸಭೆ ಕ್ಲಬ್‌ನ ಕಚೇರಿಯಲ್ಲಿ ಕ್ಲಬ್‌ನ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನವೆಂಬರ್ ತಿಂಗಳಿನಲ್ಲಿ ಕ್ಲಬ್ ವತಿಯಿಂದ ಜಿಲ್ಲಾಮಟ್ಟದಲ್ಲಿ ಮಹಿಳೆಯರಿಗೆ ಥ್ರೋಬಾಲ್ ಪುರುಷರಿಗೆ ವಾಲಿಬಾಲ್ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲು ತೀರ್ಮಾನಿಸಲಾಯಿತು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚೈಯ್ಯಂಡ ರಘು ತಿಮ್ಮಯ್ಯ ಹಾಗೂ ಹಿರಿಯರಾದ ಬೊಳ್ಳಚೆಟ್ಟಿರ ಚೆಟ್ಟಿಚ್ಚ ಅವರು ಇದರ ಬಗ್ಗೆ ಸೂಕ್ತ ಮಾಹಿತಿ ಸಲಹೆ ಸೂಚನೆಯನ್ನು ನೀಡಿ ಮತ್ತೊಂದು ಸಭೆ ನಡೆಸಿ ಕ್ರೀಡಾಕೂಟ ನಡೆಸುವ ದಿನಾಂಕ ನಿಗದಿಪಡಿಸುವುದಾಗಿ ಸಭೆ ತೀರ್ಮಾನಿಸಿತು.

ಈ ಸಂದರ್ಭ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಬಿದ್ದಂಡ ಸಂದೀಪ್ ನಂಜಪ್ಪ, ಹಿರಿಯ ಕ್ರೀಡಾಪಟು ಬಾಕಿಲನ ವನಿತಾ ವಿಜಯ್, ಕಾರ್ಯದರ್ಶಿ ಬೊಳ್ಳಚೆಟ್ಟಿರ ಜಯಂತಿ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಚೆಯ್ಯಂಡ ಕಸ್ತೂರಿ ತಿಮ್ಮಯ್ಯ, ತೊತ್ತಿಯಂಡ ಸುಪ್ರೀತಾ, ಆಂಗೀರ ಸಂತೋಷ್, ಮೇಡತನ ಶಾಂತಿ, ಸೇರಿದಂತೆ ಕ್ಲಬ್ಬಿನ ಪದಾಧಿಕಾರಿಗಳು, ಕ್ರೀಡಾ ಅಭಿಮಾನಿಗಳು ಭಾಗವಹಿಸಿದ್ದರು. ಮೇಡತನ ರಶ್ಮಿ ಶಿವರಾಂ ಪ್ರಾರ್ಥಿಸಿ, ಉಪಾಧ್ಯಕ್ಷ ಗುಡ್ಡೇರ ಲಕ್ಷು ಸೋಮಣ್ಣ ಸ್ವಾಗತಿಸಿ, ಸಹ ಕಾರ್ಯದರ್ಶಿ ಬೊಳ್ಳಚೆಟ್ಟಿರ ಅಚ್ಚಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.