ಸೋಮವಾರಪೇಟೆ, ಸೆ. ೨೪: ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ವ್ಯವಸ್ಥೆ ಅತ್ಯಂತ ಉನ್ನತ ಮಟ್ಟಕ್ಕೇರಿದೆ. ಈ ನಿಟ್ಟಿನಲ್ಲಿ ಇಂಗ್ಲೀಷ್ ಜ್ಞಾನ ಅವಶ್ಯಕವಾಗಿದೆ. ಇದನ್ನು ಮನಗಂಡು ಕುಗ್ರಾಮಗಳ ಮಕ್ಕಳೂ ಸಹ ಆಂಗ್ಲಮಾಧ್ಯಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಬೆಟ್ಟದಳ್ಳಿಯಂತಹ ಗ್ರಾಮದಲ್ಲಿ ಗ್ರಾಮಸ್ಥರು, ದಾನಿಗಳೇ ಸೇರಿ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆ ಸ್ಥಾಪಿಸಿರುವುದು ಸಾಧನೆಯೇ ಸರಿ ಎಂದು ವಿದ್ಯಾಸಂಸ್ಥೆಯ ನೂತನ ಅಧ್ಯಕ್ಷ ಹೆಚ್.ಎನ್. ರವೀಂದ್ರ ಹೇಳಿದರು.

ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಂತಳ್ಳಿಯ ಬೆಟ್ಟದಳ್ಳಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದೆ. ಕುಗ್ರಾಮಗಳಿಗೆ ಶಾಲಾ ವಾಹನದ ವ್ಯವಸ್ಥೆ ಒದಗಿಸಲಾಗಿದೆ ಎಂದರು.

ಮುAದಿನ ದಿನಗಳಲ್ಲಿ ವಸತಿ ಶಾಲೆ ಸ್ಥಾಪನೆಯ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ. ಗ್ರಾಮೀಣ ಪ್ರದೇಶದ ಮಕ್ಕಳೂ ಸಹ ಪಟ್ಟಣದ ಮಕ್ಕಳಷ್ಟೇ ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಆಧುನಿಕ ಕ್ರಮಗಳನ್ನು ಅಳವಡಿಸಲಾಗುತ್ತಿದೆ. ಸಿಬಿಎಸ್‌ಸಿ ಸಿಲಬಸ್ ಅಳವಡಿಕೆ ಬಗ್ಗೆ ಪ್ರಯತ್ನ ಸಾಗಿದೆ. ಇದರೊಂದಿಗೆ ಸಿಇಟಿ, ನೀಟ್ ಪರೀಕ್ಷೆಗೆ ಪೂರ್ವ ತಯಾರಿ ತರಗತಿಗಳ ಆರಂಭಕ್ಕೂ ಚಿಂತನೆ ಹರಿಸಲಾಗಿದೆ ಎಂದು ರವೀಂದ್ರ ತಿಳಿಸಿದರು.

೧೦ ವರ್ಷಗಳನ್ನು ಪೂರೈಸುತ್ತಿರುವ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನೂ ಕಲಿಸಲಾಗುತ್ತಿದೆ. ಕ್ರೀಡೆ, ನೃತ್ಯ, ಕರಾಟೆ, ಯೋಗ, ಅಬಾಕಸ್ ತರಬೇತಿ ನೀಡಲಾಗುತ್ತಿದೆ ಎಂದು ರವೀಂದ್ರ ಮಾಹಿತಿ ನೀಡಿದರು.

ಶಾಲಾ ಜಾಗದ ಒತ್ತುವರಿ ವಿಚಾರವಾಗಿ ನಡೆದ ವಿದ್ಯಮಾನಗಳು ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ನಿರ್ದೇಶಕ ಅರುಣ್ ಕೊತ್ನಳ್ಳಿ ಅವರು ಸಭೆಗೆ ಮಾಹಿತಿ ನೀಡಿದರು.

ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕಾರ್ಯಪ್ಪ ಅವರು ವಾರ್ಷಿಕ ವರದಿ ವಾಚಿಸಿದರು. ಲೆಕ್ಕಪತ್ರವನ್ನು ವಿದ್ಯಾಸಂಸ್ಥೆಯ ಖಜಾಂಚಿ ರಾಜೇಶ್ ಮಂಡಿಸಿದರು. ಅಂದಾಜು ಆಯವ್ಯಯ ಹಾಗೂ ಅಭಿವೃದ್ಧಿ ವರದಿಯನ್ನು ಮುಖ್ಯ ಶಿಕ್ಷಕಿ ಲೀಲಾವತಿ ಮಂಡಿಸಿದರು. ಕರೆಸ್ಪಾಂಡೆಟ್ ಪ್ರದೀಪ್, ನಿರ್ದೇಶಕರುಗಳಾದ ಚಂಗಪ್ಪ, ಕೆ.ಕೆ. ಗೋಪಾಲ್, ವೆಂಕಟೇಶ್, ಸುಖಾಂತ್, ಜಿ.ಎಸ್. ಮಧುಕುಮಾರ್, ಕಿಶನ್, ಸುಧಿನ್, ದಿವ್ಯಕುಮಾರ್ ಸೇರಿದಂತೆ ಇತರರು ಇದ್ದರು.