ಚೆಯ್ಯಂಡಾಣೆ, ಸೆ. ೨೪: ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೪೯ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಕಲ್ಯಾಟಂಡ ಎ. ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಒಟ್ಟು ೧೯ ಕೋಟಿ ೬೮ ಲಕ್ಷ ಬಂಡವಾಳ ಹೊಂದಿದ್ದು, ಸಂಘದ ಸದಸ್ಯರಿಗೆ ಕೆಸಿಸಿ ಸಾಲ, ಗೊಬ್ಬರ ಸಾಲ, ಜಮೀನು ಸಾಲ, ಸ್ವಸಹಾಯ ಗುಂಪು ಸಾಲ, ನಿರಖು ಠೇವಣಿ ಸಾಲ, ಭವಿಷ್ಯ ಸಾಲ ಎಂದು ಒಟ್ಟಾಗಿ ೧೦ ಕೋಟಿ ೬೬ ಲಕ್ಷ ನೀಡಿದ್ದು, ಪ್ರಸಕ್ತ ಸಾಲಿನ ಸಂಘವು ರೂ. ೨೩.೦೯ ಲಕ್ಷ ಲಾಭವನ್ನು ಗಳಿಸಿದೆ. ಸದಸ್ಯರಿಗೆ ಶೇ. ೯ ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ. ಸದಸ್ಯರಿಗೆ ೬೦ ಸಾವಿರದಂತೆ ಜಮೀನು ಸಾಲವನ್ನು ನೀಡುತ್ತಿದ್ದು, ಸಂಘವು ಸತತವಾಗಿ ನಾಲ್ಕು ವರ್ಷದಿಂದ "ಎ" ಶ್ರೇಣಿಯಲ್ಲಿ ಮುಂದುವರೆಯುತ್ತಿದೆ ಎಂದರು. ಸಂಘದಲ್ಲಿರುವ ಮರಣ ನಿಧಿಯನ್ನು ೧೦ ಸಾವಿರದಿಂದ ೨೫ ಸಾವಿರಕ್ಕೆ ಏರಿಸಲಾಗಿದೆ ಎಂದರು. ಇದೆ ಸಂದರ್ಭ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಮಂಜುಳಾ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಅಲ್ಲಾರಂಡ ಅಯ್ಯಪ್ಪ, ನಿರ್ದೇಶಕರಾದ ಬಡಕಡ ಎಂ. ಬೆಳ್ಳಿಯಪ್ಪ, ನಿಡುಮಂಡ ಹರೀಶ್ ಪೂವಯ್ಯ, ಕಲ್ಯಾಟಂಡ ಎಂ. ಬೋಪಣ್ಣ, ಕೋಡಿಮಣಿಯಂಡ ಎಂ. ನಾಣಯ್ಯ, ಪರದಂಡ ಯು. ಕರುಂಬಯ್ಯ, ನಂಬಡಮAಡ ಬಿ. ಸುನಿತಾ, ಪರದಂಡ ಪ್ರಮೀಳಾ ಪೆಮ್ಮಯ್ಯ, ಎಎನ್. ಲಕ್ಷ್ಮಣ, ಪಿ.ಟಿ. ಕಾರ್ಯಪ್ಪ, ಕುಡಿಯರ ಅಚ್ಚಯ್ಯ, ಕೇಂದ್ರ ಬ್ಯಾಂಕಿನ ಮೇಲ್ವಿಚಾರಕ ನವೀನ್ ಕುಮಾರ್ ಹೆಚ್.ಟಿ. ಉಪಸ್ಥಿತರಿದ್ದರು.
ಈ ಸಂದರ್ಭ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬೊಳಿಯಾಡಿರ ಎಸ್. ಮುತ್ತಮ್ಮ ಹಾಗೂ ಚೋಯಮಾಡಂಡ ಪಿ. ಬೋಜಮ್ಮ, ೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಎಂ. ಶ್ರೇಯ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಪ್ರಮೀಳಾ ಪೆಮ್ಮಯ್ಯ ಪ್ರಾರ್ಥಿಸಿ, ತಮ್ಮಯ್ಯ ಸ್ವಾಗತಿಸಿ, ಬೆಳ್ಳಿಯಪ್ಪ ವಂದಿಸಿದರು.