ವೀರಾಜಪೇಟೆ, ಸೆ. ೨೪: ಕರ್ನಾಟಕ ರಾಜ್ಯ ಸರಕಾರದ ವೀರಾಜಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ವಿರಾಜಪೇಟೆ ಚೆಸ್ಕಾಂ ಇಲಾಖೆಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ವೀರಾಜಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೆಲವು ತಿಂಗಳ ಹಿಂದೆ ಸುರಿದ ಬಾರಿ ಮಳೆಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಡಕುಗಳನ್ನು ನೀಡದ ಉತ್ತಮ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡಿದ ಚೆಸ್ಕಾಂ ಇಲಾಖೆಯ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸನಾ ಪತ್ರ ನೀಡಲಾಯಿತು.
ಈ ಸಂದರ್ಭ ಚೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ಸುರೇಶ್ ಅವರು ಪತ್ರವನ್ನು ಸ್ವೀಕರಿಸಿ ಬಳಿಕ ಮಾತನಾಡಿ, ದಿಡ್ಡಳ್ಳಿ ಮತ್ತು ತಟ್ಟಳ್ಳಿ ಹಾಡಿಯ ಅನೇಕ ಮನೆಗೆ ವಿದ್ಯುತ್ ಪೂರೈಕೆಯ ಬಿಲ್ಗಳು ಬರುತ್ತಿದೆ. ಅಲ್ಲಿ ಕೆಲವು ಸದಸ್ಯರು ತಮ್ಮ ಆಧಾರ್ ಕಾರ್ಡ್ ನೀಡಿ ಉಚಿತ ವಿದ್ಯುತ್ ಯೋಜನೆ ಪಡೆಯಲು ನಾವೇ ಹಾಡಿಗೆ ಹೋಗಿ ನೋಂದಣಿ ಮಾಡಲು ಉದ್ದೇಶಿದ್ದೇವೆ. ದಿನಾಂಕ ನಿಗದಿ ಮಾಡಲು ಅವಕಾಶ ಮಾಡಿಕೊಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ. ಅಪ್ಪಣ್ಣ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಕಾವೇರಮ್ಮ, ನಡಿಕೇರಿಯಂಡ ಮಹೇಶ್, ಆಹಾರ ಇಲಾಖೆಯ ಅಧಿಕಾರಿ ಸೀನಾ ಕುಮಾರಿ ಸೇರಿದಂತೆ ಯೋಜನೆಯ ಸದಸ್ಯರುಗಳು, ಇಲಾಖೆಯ ಅಧಿಕಾರಿಗಳು ಹಾಜರಿದ್ದರು.