ಸೋಮವಾರಪೇಟೆ, ಸೆ. ೨೪: ಇಲ್ಲಿನ ನಂ. ೩೫೫ನೇ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಸೋಮವಾರಪೇಟೆ ಶಾಖೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಶಾಖೆಯು ನಷ್ಟ ಅನುಭವಿಸಿದ ಕಾರಣವನ್ನು ತನಿಖೆಯ ಮೂಲಕ ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ರಾಜ್ಯ ರೈತ ಸಂಘದ ತಾಲೂಕು ಘಟಕ, ತಾಲೂಕು ಕಾಫಿ ಬೆಳೆಗಾರರ ಸಂಘ, ಕಾಫಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಸಹಕಾರ ಸಂಘದ ಸೋಮವಾರಪೇಟೆ ಶಾಖೆಯ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಕಳೆದ ೧೫ ವರ್ಷಗಳಿಂದ ತಾಲೂಕು ಶಾಖೆ ನಷ್ಟದ ಹಾದಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ ರೂ. ೫,೧೧,೪೨೬ ಗಳಷ್ಟು ನಿವ್ವಳ ನಷ್ಟವಾಗಿದೆ. ನಷ್ಟವಾಗುವುದಕ್ಕೆ ಕಾರಣ ಕಂಡುಕೊಳ್ಳಬೇಕು.
ತಪ್ಪಿಸ್ಥತರ ವಿರುದ್ಧ ಕ್ರಮವಾಗಬೇಕು. ಕಾರಣರಾದವರಿಂದ ನಷ್ಟದ ಬಾಬ್ತನ್ನು ವಸೂಲಿ ಮಾಡಬೇಕು ಎಂದು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಕಾಫಿ ಬೆಳೆಗಾರರ ಸಂಘ ಮತ್ತು ಹೋರಾಟ ಸಮಿತಿಯ ಅಧ್ಯಕ್ಷರುಗಳಾದ ಬಿ.ಎಂ. ಲವ, ಎಂ.ಸಿ. ಮುದ್ದಪ್ಪ ಆಗ್ರಹಿಸಿದರು.
ಕಳೆದ ೧೫ ವರ್ಷಗಳಿಂದ ಅಂದಾಜು ರೂ. ೮೦ ಲಕ್ಷಗಳಷ್ಟು ನಷ್ಟವಾಗಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಸಹಕಾರ ಕಾಯ್ದೆ ೬೪ ಆಡಿಯಲ್ಲಿ ತನಿಖೆ ನಡೆಯಬೇಕಿದೆ. ರೈತಪರ ಸಂಘಟನೆಯ ಪದಾಧಿಕಾರಿಗಳಿಂದ, ವಕೀಲರ ಮೂಲಕ ಸಹಕಾರ ಸಂಘದ ಶಾಖೆಯ ೧೯ ಮಂದಿಗೆ ನೋಟಿಸ್ ನೀಡಲಾಗಿದೆ.
ಇದರಿಂದ ವಿಚಲಿತರಾದವರು ಹಿಂದೆ ನಡೆದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ, ನಮಗಳ ವಿರುದ್ಧವೇ ಅಪಪ್ರಚಾರ ಮಾಡಿದ್ದಾರೆ ಎಂದು ದೂರಿದರು.
ಏಲಕ್ಕಿ ಮಾರಾಟ ಸಹಕಾರ ಸಂಘದ ಸೋಮವಾರಪೇಟೆ ಶಾಖೆಯನ್ನು ಮುಚ್ಚಲು ಅವಕಾಶ ನೀಡುವುದಿಲ್ಲ.
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ರೈತ ಸಂಘದ ಸಂಚಾಲಕ ಎಚ್.ಈ. ರಮೇಶ್, ಯಡೂರು ಭಾನುಪ್ರಕಾಶ್ ಇದ್ದರು.