ಸೋಮವಾರಪೇಟೆ, ಸೆ. ೨೪: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ವಿದ್ಯಾಸಂಸ್ಥೆಯ ಸಂಚಾಲಕ ಅವಿನಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಅವಿನಾಶ್ ಅವರು, ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ವಿದ್ಯಾರ್ಥಿ ಸಂಘ ಪ್ರಮುಖ ವೇದಿಕೆಯಾಗಿದೆ.

ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ವ್ಯಕ್ತಪಡಿಸಲು ಇದು ಸಹಕಾರಿಯಾಗಿದೆ. ನಾಯಕತ್ವದ ಗುಣಗಳೊಂದಿಗೆ ಸಂಘಟನೆ, ಸಮಾಜಮುಖಿ ಹಾಗೂ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಉತ್ತಮ ಅವಕಾಶವನ್ನು ವಿದ್ಯಾರ್ಥಿ ಸಂಘ ಒದಗಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಮೈಸೂರಿನ ಸಂತ ಜೋಸೆಫರ ನರ್ಸಿಂಗ್ ಕಾಲೇಜಿನ ವೈದ್ಯೆ ಡಿ.ಜಿ. ಮಮತ, ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಆರ್. ಹರೀಶ್, ಓ.ಎಲ್.ವಿ. ದೇವಾಲಯದ ಪಾಲನಾ ಸಮಿತಿಯ ಕಾರ್ಯದರ್ಶಿ ಶೀಲಾ ಡಿಸೋಜ, ಸದಸ್ಯರುಗಳಾದ ಶಾಂತಿ ಡಿಸಿಲ್ವ, ಜೋಸ್ಪಿನ್ ಡಿಸೋಜ ಅವರುಗಳು ಉಪಸ್ಥಿತರಿದ್ದರು.

ಕಾಲೇಜು ಸಂಘದ ಕಾರ್ಯದರ್ಶಿಯಾಗಿ ಎಸ್.ಪಿ. ನವನೀತ್, ಜಂಟಿ ಕಾರ್ಯದರ್ಶಿಯಾಗಿ ನಿರ್ಮಿತಾ, ಖಜಾಂಚಿಯಾಗಿ ಚೇತನ್, ಜಂಟಿ ಖಜಾಂಚಿಯಾಗಿ ಪ್ರಿಯಾಂಕ, ಸಾಂಸ್ಕೃತಿಯ ಕಾರ್ಯದರ್ಶಿಯಾಗಿ ಚರಣ್, ಸಹ ಕಾರ್ಯದರ್ಶಿಯಾಗಿ ಸೃಜನಾ, ಶಿಸ್ತಿನ ನಾಯಕನಾಗಿ ದೀಪಕ್, ನಾಯಕಿಯಾಗಿ ದೀಪ್ತಿ, ಕ್ರೀಡಾ ಕಾರ್ಯದರ್ಶಿಯಾಗಿ ಸೃಜನ್, ಸಹ ಕಾರ್ಯದರ್ಶಿಯಾಗಿ ಆಶಿತ ಅವರುಗಳು ಆಯ್ಕೆಯಾಗಿದ್ದು, ವಿದ್ಯಾಸಂಸ್ಥೆಯ ಸಂಚಾಲಕ ಅವಿನಾಶ್ ಅವರು ಪ್ರಮಾಣವಚನ ಬೋಧಿಸಿದರು. ನಿಧಿ, ಶೋಭಾ ಕಾರ್ಯಕ್ರಮ ನಿರ್ವಹಿಸಿದರು.