ಮಡಿಕೇರಿ, ಸೆ. ೨೫: ತಾ.೨೨ರಿಂದ ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ತೆರಿಗೆ ವ್ಯವಸ್ಥೆಯನ್ನು ಎಲ್ಲಾ ವ್ಯಾಪಾರಸ್ಥರು ಕಡ್ಡಾಯವಾಗಿ ಜಾರಿಗೊಳಿಸಬೇಕಿದೆ.

ಈ ಹಿಂದೆ ಹೆಚ್ಚು ತೆರಿಗೆ ಪಾವತಿಸಿ ವ್ಯಾಪಾರಸ್ಥರು ಖರೀದಿ ಮಾಡಿರುವ ವಸ್ತುಗಳನ್ನು ಅವುಗಳು ಮಾರಾಟವಾಗುವವರೆಗೆ ಹಳೆಯ ದರದಲ್ಲಿ ಮಾರಾಟ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು ವಾಣಿಜ್ಯ ತೆರಿಗೆ ಇಲಾಖೆ ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ. ತಾ. ೨೪ರಂದು ವಾಣಿಜ್ಯ ತೆರಿಗೆ ಇಲಾಖೆಯ ತನಿಖಾ ತಂಡ ಮಡಿಕೇರಿಯ ಹಲವು ವಾಣಿಜ್ಯ ಮಳಿಗೆಗಳಿಗೆ ತೆರಳಿ ದಂಡ ವಿಧಿಸಿದೆ.

ತಾ. ೨೩ರಂದು ಮಾಜಿ ವಿಧಾನಸಭಾಧ್ಯಕ್ಷ ಕೆ ಜಿ ಬೋಪಯ್ಯ ಅವರು ಮಡಿಕೇರಿಯ ಎರಡು ಅಂಗಡಿಗಳಲ್ಲಿ ವಸ್ತು ಖರೀದಿಗೆ ತೆರಳಿದ್ದ ಸಂದರ್ಭದಲ್ಲಿ ಹಳೆಯ ತೆರಿಗೆ ವಿಧಿಸಿದನ್ನು ಕಂಡು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಅಲ್ಲದೆ ತೆರಿಗೆ ಇಲಾಖೆಯ ಜಂಟಿ ಆಯುಕ್ತರಿಗೆ ದೂರವಾಣಿ ಮುಖಾಂತರ ವಿವರಿಸಿದರಲ್ಲದೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದರು. ಈ ಹಿನ್ನೆಲೆಯಲ್ಲಿ ತಾ. ೨೪ರಂದು ತೆರಿಗೆ ಇಲಾಖೆಯ ತನಿಖಾ ತಂಡ ಮಡಿಕೇರಿಗೆ ಬಂದು ಹಲವು ಅಂಗಡಿಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು. ನೂತನ ವ್ಯವಸ್ಥೆಯಲ್ಲಿ ತೆರಿಗೆ ಸಂಗ್ರಹಿಸದೆ ಹಿಂದಿನ ರೀತಿಯ ತೆರಿಗೆಯನ್ನೇ ಸ್ವೀಕರಿಸುತ್ತಿದ್ದ ಎರಡು ಅಂಗಡಿಗಳ ಮೇಲೆ ದಂಡ ವಿಧಿಸಿತು. ಈ ಬಗ್ಗೆ ಮಡಿಕೇರಿಯ ವಾಣಿಜ್ಯ ತೆರಿಗೆ ಅಧಿಕಾರಿಗಳು ಕೂಡ ಸ್ಪಷ್ಟನೆ ನೀಡಿದ್ದು ತಾ.೧೯ರಂದು ೪ಏಳನೇ ಪುಟಕ್ಕೆ (ಮೊದಲ ಪುಟದಿಂದ) ಸರ್ಕಾರ ಅಧಿಸೂಚನೆ ಹೊರಡಿಸಿದ್ದು ತಾ. ೨೨ ರಿಂದ ಜಾರಿಗೆ ಬರುವಂತೆ ನೂತನ ಜಿಎಸ್‌ಟಿ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಎಲ್ಲ ವ್ಯಾಪಾರಸ್ಥರು ಕಡ್ಡಾಯವಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ತೆರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಮುಂದಿನ ತಿಂಗಳು ತೆರಿಗೆ ಕಟ್ಟುವ ಸಂದರ್ಭದಲ್ಲಿ ತಾ.೨೧ ರವರೆಗೆ ಸಂಗ್ರಹಿಸಿರುವ ತೆರಿಗೆಯ ಮಾಹಿತಿ ಮತ್ತು ತಾ.೨೨ ರಿಂದ ಈ ತಿಂಗಳ ಅಂತ್ಯದವರೆಗೆ ಸಂಗ್ರಹಿಸಿರುವ ತೆರಿಗೆ ಮಾಹಿತಿಯನ್ನು ಪ್ರತ್ಯೇಕವಾಗಿ ನಮೂದಿಸಿ ಜಿಎಸ್ಟಿ ಪಾವತಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ತಾ.೨೨ಕ್ಕೂ ಮುಂಚೆ ಹೆಚ್ಚಿನ ತೆರಿಗೆ ಪಾವತಿಸಿ ಖರೀದಿಸಿರುವ ವಸ್ತುಗಳನ್ನು ಇದೀಗ ಕಡಿಮೆ ತೆರಿಗೆ ವಿಧಿಸಿ ಮಾರಾಟ ಮಾಡಿದರೆ ನಷ್ಟ ಉಂಟಾಗುತ್ತದೆ ಎಂಬ ಹಲವು ವರ್ತಕರ ಅನುಮಾನದ ಬಗ್ಗೆ ಹಿರಿಯ ಆಡಿಟರ್ ಅಬ್ದುಲ್ ರೆಹಮಾನ್ ಅವರು ಪ್ರತಿಕ್ರಿಯಿಸಿದ್ದು ಯಾವುದೇ ಕಾರಣಕ್ಕೂ ಅದರಿಂದ ನಷ್ಟ ಉಂಟಾಗದು ಹಾಗೂ ಸೆಕ್ಷನ್ ೧೪ ರ ಪ್ರಕಾರ ಇನ್ಪುಟ್ ತೆರಿಗೆ ವ್ಯಾಪಾರಸ್ಥರ ಹೆಸರಿನಲ್ಲಿಯೇ ಇರುವುದರಿಂದ ಯಾವುದೇ ಗೊಂದಲ ಉಂಟಾಗದು ಎಂದು ಸ್ಪಷ್ಟಪಡಿಸಿದ್ದಾರೆ.