ಮಡಿಕೇರಿ, ಸೆ. ೨೬: ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಎಂಬವರ ಕಾಫಿ ಹಾಗೂ ಏಲಕ್ಕಿ ತೋಟವನ್ನು ನಾಶಮಾಡಿದ ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಆಗ್ರಹಿಸಿ ರೈತ ಹೋರಾಟ ಸಮಿತಿ ಹಾಗೂ ರೈತ ಸಂಘದ ವತಿಯಿಂದ ಅರಣ್ಯ ಭವನದ ಎದುರು ಪ್ರತಿಭಟನೆ ನಡೆದು ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ ಸ್ಫೋಟಗೊಂಡಿತು. ತೋಟ ನಾಶ ಮಾಡಿದ ಇಬ್ಬರು ಅಧಿಕಾರಿಗಳನ್ನು ವಜಾ ಮಾಡಲೇಬೇಕೆಂದು ರೈತರು ಬಿಗಿಪಟ್ಟು ಹಿಡಿದರು.
ಅರಣ್ಯ ಭವನದ ಗೇಟ್ ಬಳಿ ಜಮಾವಣೆಗೊಂಡ ರೈತರು ಅಲ್ಲಿಂದ ಅರಣ್ಯ ಇಲಾಖೆ ಹಾಗೂ ಅರಣ್ಯಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ಅರಣ್ಯ ಭವನದ ಕಚೇರಿ ಎದುರು ಸೇರಿ ಪ್ರತಿಭಟನೆ ಆರಂಭಿಸಿದರು. ನಮ್ಮ ಭೂಮಿ ನಮ್ಮ ಹಕ್ಕು, ಕೆಣಕಬೇಡಿ ಕೆಣಕಬೇಡಿ ರೈತರನ್ನು ಕೆಣಕಬೇಡಿ, ರೈತರನ್ನು ಬದುಕಲು ಬಿಡಿ. ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಶಾಸಕರು, ಸಚಿವರು, ವಿಪಕ್ಷ ನಾಯಕರುಗಳ ವಿರುದ್ಧವೂ ಧಿಕ್ಕಾರ ಕೂಗಿದರು. ನಾಣಿಯಪ್ಪ ಅವರ ತೋಟ ನಾಶ ಮಾಡಿದ ಅಧಿಕಾರಿಗಳಾದ ದರ್ಶಿನಿ ಹಾಗೂ ದಿನೇಶ್ ಇವರುಗಳನ್ನು ವಜಾ ಮಾಡಬೇಕು ಹಾಗೂ ನಾಣಿಯಪ್ಪ ಅವರಿಗೆ ರೂ. ೩೦ ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಅವರು ಮನವಿ ಪತ್ರ ನೀಡುವಂತೆ ಕೇಳಿದಾಗ, ತೋಟ ನಾಶಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಪತ್ರಿಕಾಗೋಷ್ಠಿ ನಡೆಸಿ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗಡುವು ನೀಡಿ ಒಂದು ತಿಂಗಳು ಕಳೆದರೂ ಇದುವರೆಗೆ ಯಾವುದೇ ಕ್ರಮವಾಗಿಲ್ಲ; ಈ ಬಗ್ಗೆ ನಿಮಗೆ ಮಾಹಿತಿ ಇರಲೇಬೇಕಲ್ಲ ಮನವಿ ಪತ್ರ ಯಾಕೆ ಕೇಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಯಾಕಾಗಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಅಸಹಾಯಕ ವೃದ್ಧ ದಂಪತಿಯ ತೋಟವನ್ನು ಕಡಿದು ನಾಶ ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರಲ್ಲದೆ ಯಾವುದೇ ನೋಟೀಸ್ ನೀಡದೆ ಈ ರೀತಿಯ ಕ್ರಮಕೈಗೊಂಡಿರುವುದು ಸರಿಯಲ್ಲ ಎಂದು ಹೇಳಿದರು.
ಆ ತೋಟದ ಜಾಗ ಡೀಮ್ಡ್ ಫಾರೆಸ್ಟ್ ಅಂತೆ ಎಂದು ಸೋನಾಲ್ ವೃಷ್ಣಿ ಅವರು ಹೇಳಿದಾಗ ಪ್ರತಿಕ್ರಿಯಿಸಿದ ಸುರೇಶ್ ಚಕ್ರವರ್ತಿ ಅದು ಪೈಸಾರಿ ಜಾಗ ಎಂಬುದಾಗಿ ಕಂದಾಯ ಇಲಾಖೆ ನಮಗೆ ಮಾಹಿತಿ ನೀಡಿದೆ. ರೈತರನ್ನು ಮೂರ್ಖರನ್ನಾಗಿ ಮಾಡಬೇಡಿ. ಸರಿಯಾದ ದಾಖಲೆ ಇದ್ದರೆ ಕೊಡಿ ಎಂದು ಹೇಳಿದರು. ಈ ವೇಳೆ ಮಾತನಾಡಿದ ಡಿಎಫ್‌ಓ ಅಭಿಷೇಕ್ ರೈತರಿಗೆ ಜಾಗದ ವಿಚಾರದಲ್ಲಿ ಯಾವುದೇ ತೊಂದರೆಗಳಾಗಬಾರದು; ಗೊಂದಲಗಳಿರಬಾರದು. ಈ ನಿಟ್ಟಿನಲ್ಲಿ ಜಿಲ್ಲೆ, ತಾಲೂಕು ಹಾಗೂ ಗ್ರಾಮಟ್ಟದಲ್ಲಿ ಸಮಿತಿ ರಚಿಸಿ ಸರ್ವೆ ನಡೆಸಿ ಸರ್ಕಾರಕ್ಕೆ ಸೂಕ್ತ ವರದಿಯನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ಹಾಗಾದರೆ ತೋಟ ನಾಶ ಯಾಕಾಗಿ ನಡೆಯಿತು ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ತೋಟ ನಾಶ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮವಾಗಲೇಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಒಂದು ವಾರದಲ್ಲಿ ತನಿಖೆ ನಡೆಸಿ ಅಧಿಕಾರಿಗಳ ತಪ್ಪಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸೋನಾಲ್ ವೃಷ್ಣಿ ಹಾಗೂ ಅಭಿಷೇಕ್ ಹೇಳಿದರಾದರೂ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಘಟನೆ ನಡೆದು ತಿಂಗಳುಗಳು ಕಳೆದರೂ ಇದುವರೆಗೆ ಯಾಕೆ ಏನೂ ಕ್ರಮಕೈಗೊಳ್ಳಲಿಲ್ಲ. ಇನ್ನೂ ಕಾಯಲು ಸಾಧ್ಯವಿಲ್ಲ. ಈ ಕ್ಷಣವೇ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಪಟ್ಟುಹಿಡಿದರು.
ತನಿಖೆಗೆ ಇಂದು ಆದೇಶ ಹೊರಡಿಸುತ್ತೇವೆ; ಆದರೆ ಅವರ ವಿರುದ್ಧ ಕ್ರಮಕೈಗೊಳ್ಳಲು ಕೆಲವೊಂದು ಪ್ರಕ್ರಿಯೆಗಳು ನಡಯಬೇಕಿದೆ; ಆ ಪ್ರಕ್ರಿಯೆಗಳನ್ನು ಕೈಗೊಂಡು ನಂತರ ಕ್ರಮಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದರೂ ಪಟ್ಟು ಸಡಿಲಿಸದ ಪ್ರತಿಭಟನಾಕಾರರು ತೋಟ ನಾಶ ಮಾಡಿದ ಅಧಿಕಾರಿಗಳು ವಜಾ ಆಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ತಿಳಿಸಿ ಅರಣ್ಯ ಭವನದ ಎದುರು ಪ್ರತಿಭಟನೆ ಮುಂದುವರೆಸಿದರು.
೮ ದಿನದೊಳಗೆ ಕ್ರಮ
ರೈತರು ಪ್ರತಿಭಟನೆ ಮುಂದುವರೆಸುತ್ತಿದ್ದAತೆ ಸಿಎಫ್ ಸೋನಾಲ್ ವೃಷ್ಣಿ ಅವರು, ತೋಟನಾಶ ಪ್ರಕರಣದ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಲಾಗುವುದು. ಅಲ್ಲದೆ ೮ ದಿನಗಳ ಒಳಗಾಗಿ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಜೊತೆಗೆ ನಾಣಿಯಪ್ಪ ಅವರಿಗೆ ಪರಿಹಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡುವುದಾಗಿ ಸುರೇಶ್ ಚಕ್ರವರ್ತಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಹೋರಾಟ ಸಮಿತಿ ಕಾನೂನು ಸಲಹೆಗಾರರಾದ ದೀಪಕ್, ರೈತ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್, ರೈತ ಹೋರಾಟ ಸಮಿತಿ ನಿರ್ದೇಶಕರಾದ ನಂದಿರ ಸಜನ್, ದಿವಾಕರ್, ಕಾಲೂರು ದರ್ಶನ್, ಭಾಗಮಂಡಲ ಹೋಬಳಿ ರೈತ ಸಂಘದ ಅಧ್ಯಕ್ಷ ಗಿರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.