ಗೋಣಿಕೊಪ್ಪಲು, ಸೆ. ೨೬: ಮನದಾಳದಲ್ಲಿ ಅವಿತಿಟ್ಟುಕೊಂಡಿದ್ದ ಭಾವನೆಗಳಿಗೆ ಅಕ್ಷರದ ರೂಪ ನೀಡುವ ಮೂಲಕ ಕವಿಗಳು ತಮ್ಮ ಕವನಗಳನ್ನು ಅನಾವರಣಗೊಳಿಸಿ ಸಾಂಸ್ಕೃತಿಕ ರಂಗು ತೋರುತ್ತಿದ್ದ ಗೋಣಿಕೊಪ್ಪ ದಸರಾ ವೇದಿಕೆಯಲ್ಲಿ ಸಾಹಿತ್ಯ ಮಳೆ ಹರಿಸಿದರು.

ರಂಗು ರಂಗಿನ ಬೆಳಕಿನ ವೈಭವದೊಂದಿಗೆ ನೃತ್ಯ, ನಾಟಕ, ಜಾದೂ, ಹಾಡುಗಾರಿಕೆ ಹೀಗೆ ನಾನಾ ಸಾಂಸ್ಕೃತಿಕ ವೈವಿಧ್ಯಗಳ ಪ್ರದರ್ಶನ ನಡೆಯುತ್ತಿದ್ದ ಗೋಣಿಕೊಪ್ಪದ ಕಾವೇರಿ ಕಲಾವೇದಿಕೆಯಲ್ಲಿಂದು ಸಾಹಿತ್ಯದ ಹೊನಲು ಆವರಿಸಿತ್ತು. ಬರೋಬ್ಬರಿ ೧೦೧ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ಗೋಣಿಕೊಪ್ಪ ದಸರಾ ಅಂಗವಾಗಿ ಶ್ರೀ ಕಾವೇರಿ ದಸರಾ ಸಮಿತಿ, ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಬಹುಭಾಷಾ ಕವಿಗೋಷ್ಠಿ ಸಾಹಿತ್ಯಾಸಕ್ತರನ್ನು ಸೆಳೆಯಿತು. ಪ್ರಕೃತಿ, ತಾಯಿ, ತಂದೆ, ಗ್ರಾಮೀಣ ಜನ ಜೀವನ, ದಸರಾ ಮಹತ್ವ, ಕೊಡಗಿನ ಸೊಬಗು, ಕನ್ನಡ ನಾಡು-ನುಡಿ ಹೀಗೆ ನಾನಾ ವಿಷಯಗಳ ಕುರಿತಾದ ಕವನಗಳು ಹೊರಹೊಮ್ಮಿದವು. ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ) ಕೊಡಗು ಜಿಲ್ಲೆ ಸೇರಿದಂತೆ ಬೆಂಗಳೂರು, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಸುಳ್ಯ, ಮೈಸೂರು, ಕುಂದಾಪುರ ಜಿಲ್ಲೆಗಳಿಂದಲೂ ಕವಿಗಳು ಪಾಲ್ಗೊಂಡಿದ್ದರು. ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಯರವ, ಕುಂಬಾರ, ಹಿಂದಿ, ತಮಿಳು, ಮಲಯಾಳಂ, ಮರಾಠಿ, ಕುಂದಾಪುರ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಕವಿಗಳು ಕವನ ವಾಚನ ನಡೆಸಿದರು. ಮಕ್ಕಳು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು.

ಕಿಗ್ಗಟ್‌ನಾಡು ಹಿರಿಯ ನಾಗರಿಕ ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಬದುಕಿನ ಭಾಷೆಯಾಗಿದ್ದು, ಭಾಷೆ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಕವಿಗೋಷ್ಠಿ ಅಧ್ಯಕ್ಷ ಕೋಳೆರ ದಯಾಚಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಹಲವು ವರ್ಷಗಳಿಂದ ಗೋಣಿಕೊಪ್ಪ ದಸರಾ ವೇದಿಕೆಯಲ್ಲಿ ಉತ್ತಮ ರೀತಿಯಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸುತ್ತಾ ಬರಲಾಗುತ್ತಿತ್ತು. ಈ ಬಾರಿಯೂ ಉತ್ತಮ ರೀತಿಯಲ್ಲಿ ಕವಿಗೋಷ್ಠಿ ಆಯೋಜನೆ ಮಾಡಲಾಗಿದೆ. ನಿರೀಕ್ಷೆಗೂ ಮೀರಿ ಕವಿಗಳು ಕವನ ವಾಚಿಸಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮುಧೋಶ್ ಪೂವಯ್ಯ, ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಎಸ್.ಎಂ. ರಜನಿ, ಕಾವೇರಿ ದಸರಾ ಸಮಿತಿಯ ಸಂಯೋಜಕರಾದ ಎಂ.ಕೆ. ಚಂದನ್ ಕಾಮತ್, ಶೀಲಾ ಬೋಪಣ್ಣ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ಕಂದಾದೇವಯ್ಯ, ಸಾಹಿತಿ ಉಳುವಂಗಡ ಕಾವೇರಿ ಉದಯ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಇದೇ ಸಂದರ್ಭ ಸಾಹಿತಿ ಉಳುವಂಗಡ ಕಾವೇರಿ ಬರೆದ ‘ವಚನವಾರಿಧಿ’ ಆಧುನಿಕ ವಚನಗಳ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.

ಪÀÀದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್. ಬೈರಪ್ಪ ಅವರ ನಿಧನಕ್ಕೆ ಸಭೆಯು ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿತು. ಶಿಕ್ಷಕಿ ಹೆಚ್.ಆರ್, ನಳಿನಿ ಹಾಗೂ ಸುಶ್ಮಿತಾ ನಿರೂಪಿಸಿ, ಶೀಲಾ ಬೋಪಣ್ಣ ಸ್ವಾಗತಿಸಿ, ಡಿ.ಚಂದನ ಮಂಜುನಾಥ್ ವಂದಿಸಿದರು.