ಮಡಿಕೇರಿ, ಸೆ. ೨೬ : ಮಡಿಕೇರಿಯಲ್ಲಿಂದು ಶ್ವಾನಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲೆಯಾದ್ಯಂತ ಮಾತ್ರವಲ್ಲದೆ ಹಾಸನ, ಪಿರಿಯಾಪಟ್ಟಣದಿಂದಲೂ ಬೆಳ್ಳಂಬೆಳಿಗ್ಗೆ ತಮ್ಮ ಪ್ರೀತಿಯ ಶ್ವಾನಗಳನ್ನು ಅವುಗಳ ಮಾಲೀಕರು ಗಾಂಧಿ ಮೈದಾನಕ್ಕೆ ಕರೆ ತಂದಿದ್ದರು.
ಸಣ್ಣ ಜಾತಿಯ ಮುಗ್ಧ ತಳಿಗಳನ್ನು ಕೆಲವರು ತಮ್ಮ ಹೆಗಲ ಮೇಲಿರಿಸಿದ್ದರೆ, ಲಾಸ್ಹಾ ಆಪ್ಸೋ ತಳಿಯ ಮುಗ್ಧ ಶ್ವಾನದ ಮಾಲೀಕರೋರ್ವರು ಪುಟಾಣಿ ಮಕ್ಕಳನ್ನು ಕುಳ್ಳಿರಿಸುವ ತೊಟ್ಟಿಲಿನಲ್ಲಿ ಕರೆತಂದಿದ್ದರು. ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದಕ್ಕೆ ಬಣ್ಣ-ಬಣ್ಣದ ಬಟ್ಟೆಯನ್ನು ಅದರ ಮಾಲೀಕರು ತೊಡಿಸಿದ್ದರೆ, ಪಗ್ ತಳಿಯ ಪುಟಾಣಿ ನಾಯಿಯ ಪಾದಗಳ ರಕ್ಷಣೆಗೆ ಶೂಸ್ ಹಾಕಿ ಪ್ರದರ್ಶನಕ್ಕೆ ಕರೆತರಲಾಗಿತ್ತು. ಆಕರ್ಷಕ ರೋಮವುಳ್ಳ ಶಿಟ್ಸೂ ಹಾಗೂ ಲಾಸ್ಹಾ ಆಪ್ಸೋ ತಳಿಯ ೨ ಪುಟಾಣಿ ನಾಯಿಗಳ ಮೈಯ ರೋಮವನ್ನು ಮಾಲೀಕರು ಬಾಚಣಿಗೆಯಲ್ಲಿ ಬಾಚುತ್ತಿದ್ದ ದೃಶ್ಯವೂ ಕಂಡುಬAದಿತು.
ಮತ್ತೊಂದೆಡೆ ಭಯಾನಕ ಸ್ವರೂಪಿ ಬೃಹತ್ ನಾಯಿಗಳು ಒಂದಕ್ಕೊAದು ಕಚ್ಚಿಕೊಳ್ಳದಂತೆ ನಿಯಂತ್ರಿಸುವಲ್ಲಿ ಕೆಲವರು ಹರಸಾಹಸ ಪಡುತ್ತಿದ್ದರು. ಕೆಲ ವಯಸ್ಕ ಮಾಲೀಕರು ತಮ್ಮ ನಾಯಿಗಳ ನಿಯಂತ್ರಣ ಕಳೆದ Äಕೊಳ್ಳದಂತೆ ಇರಲು ಗಟ್ಟಿಯಾಗಿ ಅವುಗಳನ್ನು ಹಿಡಿದುಕೊಂಡಿದ್ದರು, ಪುಟಾಣಿ ಬಾಲಕನೋರ್ವ ತನ್ನ ಡಾಬರ್ಮ್ಯಾನ್ ತಳಿಯ ನಾಯಿಯನ್ನು ಅತ್ಯುತ್ತಮವಾಗಿ ನಿಯಂತ್ರಿಸಿದನು. ಯುವ ದಸರಾ ಸಮಿತಿ ಹಾಗೂ ಪಶುಪಾಲನಾ ಇಲಾಖೆ ವತಿಯಿಂದ ಮುಗ್ಧ ಹಾಗೂ ಭಯಾನಕ ನಾಯಿಗಳಿಗೆ ತಂಗಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
೨೦ಕ್ಕೂ ಅಧಿಕ ತಳಿಗಳು
ಮೂಲತಃ ಕರ್ನಾಟಕದ್ದೇ ಜಾತಿ ಆಗಿರುವ ವಿಶ್ವಪ್ರಸಿದ್ಧ ಹಾಗೂ ಭಾರತೀಯ ಸೇನೆಯಲ್ಲಿ ಬಳಸಲ್ಪಡುವ ಅತೀವೇಗದ ನಾಯಿತಳಿ ಬೃಹತ್ ಗಾತ್ರದ ಮುದೋಳ ನೆರೆದಿದ್ದವರ ಗಮನ ಸೆಳೆಯಿತು. ಮತ್ತೊಂದೆಡೆ ಅತಿ ಸಣ್ಣ ಗಾತ್ರದ ಮಿನಿಯೇಚರ್ ಪಿನ್ಶರ್ ತಳಿಯ ನಾಯಿಗಳನ್ನು ಒಂದೇ ಕೈಯಲ್ಲಿ ಹಿಡಿದುಕೊಂಡು ಮಾಲೀಕರು ಪ್ರದರ್ಶನಾ ಸ್ಥಳಕ್ಕೆ ಕರೆತಂದರು. ಭಯಾನಕ ಬೃಹತ್ ತಳಿಗಳಾದ ನಿಯೋಪಾಲಿಟನ್ ಮಾಸ್ಟಿಫ್, ಕೇನ್ ಕಾರ್ಸೊ, ಟಿಬೇಟನ್ ಮಾಸ್ಟಿಫ್, ಜರ್ಮನ್ ಶೆಪರ್ಡ್, ಗ್ರೇಟ್ ಡೇನ್, ರಾಟ್ವೈಲರ್, ಡಾಬರ್ಮ್ಯಾನ್, ಗಾತ್ರದಲ್ಲಿ ಚಿಕ್ಕದಾದರು ದಷ್ಟಪುಷ್ಟ ಅಮೇರಿಕನ್ ಬುಲ್ಡಾಗ್, ಬಾಕ್ಸರ್ಗಳ ಪ್ರದರ್ಶನ ವೇಳೆ ಸಾರ್ವಜನಿಕರು ಇವುಗಳ ವೀಕ್ಷಣೆಗೆ ಮುಗಿಬಿದ್ದರು.
ಅಗಲ ತಳಿಯ ಡ್ಯಾಶ್ವುಂಡ್, ವಿಭಿನ್ನ ಮುಖ ಸ್ವರೂಪದ ಬುಲ್ ಟೆರಿಯರ್, ಪಗ್, ಸಣ್ಣ ತಳಿಯ ಬೀಗಲ್, ಆಕರ್ಷಕ ರೋಮವುಳ್ಳ ಲಾಸ್ಹೋ ಆಪ್ಸ, ಶಿಟ್ಸೂ, ಪೊಮೆರೇನಿಯನ್, ಮುಗ್ಧ ಹಾಗೂ ಸರ್ವರೊಂದಿಗೆ ಬೆರೆಯುವ ಲ್ಯಾಬ್ರಡಾರ್, ಗೋಲ್ಡನ್ ರಿಟ್ರೀವರ್, ಸೈಬೀರಿಯನ್ ಹಸ್ಕಿ ಹಾಗೂ ಆಕರ್ಷಕ ಕಂದು-ಕಪ್ಪು ಬಣ್ಣದ ಬೆಲ್ಜಿಯನ್ ಮಲಿನಾಯ್ಸ್ ತಳಿಗಳು ಸರ್ವರ ಗಮನ ಸೆಳೆದವು.
ಒಟ್ಟು ೮೪ ಶ್ವಾನಗಳು ಪ್ರದರ್ಶನ ನೀಡಿದವು. ನಾಯಿಗಳ ರೋಮದ ಬಣ್ಣ, ಆರೋಗ್ಯ, ರೋಮದ ನಿರ್ವಹಣೆ ಇತ್ಯಾದಿಗಳ ಆಧಾರದಲ್ಲಿ ಪ್ರತಿ ತಳಿಯ ನಾಯಿಗೂ ಪ್ರತ್ಯೇಕ ಬಹುಮಾನ ನೀಡಲಾಯಿತು. ವಿಜೇತ ವಿವಿಧ ತಳಿಗಳ ನಾಯಿಗಳು ಅಂತಿಮ ಪ್ರದರ್ಶನದಲ್ಲಿ ಭಾಗಿಯಾದವು.
ಡಾಗ್ ಶೋ ನಲ್ಲಿ ಭಾಗಿಯಾದ ಮೇಕೆ..!
ದೇಶ, ವಿದೇಶಿ ತಳಿಗಳ ನಾಯಿಗಳ ಪ್ರದರ್ಶನ ಒಂದೆಡೆಯಾದರೆ, ನಾನೂ ಕಡಿಮೆ ಏನಿಲ್ಲ ಎಂಬAತೆ ಕೇಸರಿ ಬಣ್ಣದ ಆಕರ್ಷಕ ಗಡ್ಡದ ಮೇಕೆಯೂ ಪ್ರದರ್ಶನಕ್ಕೆ ಇಳಿಯಿತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕೊಣನೂರು ಗ್ರಾಮದ ರೈತ ಮುಖಂಡ ವಾಜಿದ್ ಅವರು ತಾವು ಸಾಕಿ ಬೆಳೆಸಿದ ಸಣ್ಣ ತಳಿಯ ಮೇಕೆಯನ್ನು ಪ್ರದರ್ಶಿಸಿ ಗಮನ ಸೆಳೆದರು. ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ)
ಮಡಿಕೇರಿ ದಸರಾವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು - ಜಿ. ಚಿದ್ವಿಲಾಸ್
ಮಡಿಕೇರಿ ದಸರಾವನ್ನು ಸರಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಅವರು ಹೇಳಿದರು. ಇಂದು ನಗರದ ಗಾಂಧಿ ಮೈದಾನದಲ್ಲಿ ಯುವ ದಸರಾ ಸಮಿತಿ ಹಾಗೂ ಪಶುಪಾಲನಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಡಿಕೇರಿ ದಸರಾ ಈ ಬಾರಿ ನಿರೀಕ್ಷೆಗೂ ಮೀರಿ ಪ್ರಸಿದ್ಧತೆ ಪಡೆದುಕೊಂಡಿದೆ. ಕಾಫಿ ದಸರಾಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ದಸರಾ ಕ್ರೀಡಾಕೂಟದ ಅಂಗವಾಗಿ ಏರ್ಪಡಿಸಿದ್ದ ಒಳಾಂಗಣ ಕ್ರೀಡೆಗಳಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದಾರೆ. ಯುವ ದಸರಾ ಪ್ರಯುಕ್ತ ಇಂದಿನ ಶ್ವಾನ ಪ್ರದರ್ಶನಕ್ಕೆ ಕೂಡ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಉಪ ಸಮಿತಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಉತ್ತಮ ಕಾರ್ಯಕ್ರಮಗಳನ್ನು ನೀಡಿರೂ, ಅನುದಾನ ಮಾತ್ರ ತೀರಾ ಕಡಿಮೆ ಯಾಗುತ್ತಿದೆ. ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಸರಕಾರವು ಈ ನಿಟ್ಟಿನಲ್ಲಿ ಬಜೆಟ್ನಲ್ಲಿ ಮಡಿಕೇರಿ ದಸರಾ ಜನೋತ್ಸವಕ್ಕೆ ಅನುದಾನ ಮೀಸಲಿಡುವಂತಾಗಬೇಕೆAದರು.
ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇ ಶಕರಾದ ಲಿಂಗರಾಜು ದೊಡ್ಡಮನಿ ಮಾತನಾಡಿ, ೨೦೩೦ ರೊಳಗೆ ಭಾರತವನ್ನು ರೇಬಿಸ್ ಮುಕ್ತವಾಗಿಸುವ ಯೋಜನೆ ಇದೆ. ಸಾಕುಪ್ರಾಣಿಗಳ ಮಾಲೀಕರು ಈ ನಿಟ್ಟಿನಲ್ಲಿ ಸಹಕರಿಸಿ ತಮ್ಮ ಪ್ರಾಣಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಬೇಕೆಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ತೆನ್ನಿರ ಮೈನಾ ಅವರು ಮಾತನಾಡಿ, ಸಾಕು ಪ್ರಾಣಿಗಳ ಮೇಲೆ ತೋರಿಸುವ ಪ್ರೀತಿಯಂತೆ ಸಮಾಜದಲ್ಲೂ ಪರಸ್ಪರ ಪ್ರೀತಿ ಬೆಳೆದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ, ಉಪಾಧ್ಯಕ್ಷ ಮೋಹನ್, ಮಡಿಕೇರಿ ಅನಿಮಲ್ ವೆಲ್ಫೇರ್ ಸಂಘಟನೆಯ ಉಪಾಧ್ಯಕ್ಷ ಅಯ್ಯಪ್ಪ, ಕಾರ್ಯಕ್ರಮ ಆಯೋಜಕ ಅತುಲ್ ಶರಣ್, ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಉದ್ಯಮಿ ಪುಷ್ಪ ಪೂಣಚ್ಚ, ಕಿರಣ್ ದೇರಾಜೆ, ಕೊಣನೂರು ರೈತ ಮುಖಂಡ ವಾಜಿದ್, ಯುವ ದಸರಾ ಸಮಿತಿಯ ಸದಸ್ಯರು, ಪಶು ವೈದ್ಯರಾದ ಡಾ.ಚಿದಾನಂದ ಹಾಗೂ ಇತರರು ಹಾಜರಿದ್ದರು.