ಮಡಿಕೇರಿ, ಸೆ. ೨೭: ಮಡಿಕೇರಿ ದಸರಾದ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ಕಾರ್ಯಕ್ರಮದ ಅಂಗವಾಗಿ ನಡೆದ ಸೈಕಲ್ ಜಾಥಾ ಪ್ಲಾಸ್ಟಿಕ್ ಮುಕ್ತ ಸಮಾಜದ ಜಾಗೃತಿ ಮೂಡಿಸಿದರೆ, ಸೂಪರ್ ಬೈಕ್‌ಗಳ ರೋಡ್ ಶೋ ಸಂಚಲನವನ್ನು ಸೃಷ್ಟಿಸಿತು.
ಸೈಕಲ್ ಜಾಥಾ
ಮಡಿಕೇರಿ ಯುವ ದಸರಾ ಸಮಿತಿ, ಗ್ರೀನ್ ಸಿಟಿ ಫೋರಮ್ ಹಾಗೂ ಕ್ಲೀನ್ ಕೂರ್ಗ್ ಇನಿಷಿಯೇಟಿವ್ ವತಿಯಿಂದ ಯುವ ದಸರಾ ಪ್ರಯುಕ್ತ ಸೈಕಲ್ ಜಾಥಾ ನಗರದಲ್ಲಿ ನಡೆಯಿತು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಯಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಗ್ರೀನ್ ಸಿಟಿ ಫೋರಮ್‌ನ ಚೇಯ್ಯಂಡ ಸತ್ಯ ಹಾಗೂ ಜಯ ಚಿಣ್ಣಪ್ಪ, ಪ್ರಮುಖರಾದ ಪ್ರಸನ್ನಭಟ್ ಅವರುಗಳು ಜಾಥಾಗೆ ಚಾಲನೆ ನೀಡಿದರು. ಜಾಥಾವು ನಂತರ ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ರೇಸ್ ಕೋರ್ಸ್ ರಸ್ತೆ ಮೂಲಕ ಸಾಗಿ ಗಾಂಧಿ ಮೈದಾನದಲ್ಲಿ ಸಮಾಪ್ತಿಗೊಂಡಿತು.
ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಸದಸ್ಯರು ಮೂರ್ನಾಡಿನಿಂದ ಜಾಥಾಗೆ ಆಗಮಿಸಿ ಗಮನ ಸೆಳೆದರು. ಜಾಥಾದಲ್ಲಿ ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ, ಪ್ರಮುಖರಾದ ಕ್ಲೀನ್ ಕೂರ್ಗ್ ಇನಿಷಿಯೇಟಿವ್‌ನ ಅರುಣ್ ಅಪ್ಪಚ್ಚು, ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರುಗಳು ಸೇರಿದಂತೆ ಮಕ್ಕಳು, ಹಿರಿಯರಾದಿಯಾಗಿ ೬೦ಕ್ಕೂ ಅಧಿಕ ಸಂಖ್ಯೆಯಲ್ಲಿ ಸೈಕಲ್ ಪ್ರೇಮಿಗಳು ಪಾಲ್ಗೊಂಡಿದ್ದರು.
ಸAಚಲನ ಮೂಡಿಸಿದ ಸೂಪರ್ ಬೈಕ್ಸ್
ಗುಯ್..ಗುಯ್ ಅಂತ ಸದ್ದು ಮಾಡುತ್ತ ಶರವೇಗದಲ್ಲಿ ಸಾಗುವ ಸೂಪರ್ ಬೈಕ್‌ಗಳು ಕಲಾಸಂಭ್ರಮ ವೇದಿಕೆಯಲ್ಲಿ ಸಂಚಲನ ಮೂಡಿಸಿದವು.
ದಸರಾ ಅಂಗವಾಗಿ ಯುವ ದಸರಾ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಸೂಪರ್ ಬೈಕ್‌ಗಳ ಪ್ರದರ್ಶನವನ್ನು ಯುವಸಮೂಹ ಕಣ್ತುಂಬಿಕೊAಡಿತು.
೬೦೦ ರಿಂದ ೧೪೦೦ ಸಿಸಿ ಸಾಮರ್ಥ್ಯದ ಬಲಾಢ್ಯ ಬೈಕ್‌ಗಳು ಯುವಕ-ಯುವತಿಯರನ್ನು ಸೆಳೆದವು. ಕೂರ್ಗ್ ಸೂಪರ್ ಬೈರ‍್ಸ್ ತಂಡದ ೧೮ ಸವಾರರು ಮೈದಾನಕ್ಕೆ ಆಗಮಿಸುತ್ತಿದಂತೆ ಶಿಳ್ಳೆ, ಚಪ್ಪಾಳೆ ಮೂಲಕ ಸ್ವಾಗತಿಸಿಕೊಳ್ಳಲಾಯಿತು.
ಕವಾಸಕಿ ನಿಂಜ, ಝೆಡ್ ಎಕ್ಸ್, ಟ್ರಯಂಫ್, ಹಾರ್ಲಿ ಡೇವಿಡ್‌ಸನ್, ಹಯಬುಝ್ಹ ಹೀಗೆ ೧೮ ಬಗೆಯ ಬೈಕ್‌ಗಳು ಪಾಲ್ಗೊಂಡಿದ್ದವು.
ನಗರದಲ್ಲಿ ಜಾಥಾ
ಗಾಂಧಿ ಮೈದಾನದಿಂದ ನಗರದ ಮುಖ್ಯ ಬೀದಿಯಲ್ಲಿ ಸೂಪರ್ ಬೈಕ್‌ಗಳ ಜಾಥಾ ನಡೆಯಿತು. ಇದಕ್ಕೆ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಅನಂತಶಯನ, ನಗರಸಭಾ ಸದಸ್ಯ ಎಸ್.ಸಿ. ಸತೀಶ್, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯ ಅಂಬೆಕಲ್ ಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಚಂದ್ರಶೇಖರ್ ಚಾಲನೆ ನೀಡಿದರು. (ಮೊದಲ ಪುಟದಿಂದ)
ಸುರಕ್ಷಾ ಕವಚಗಳೊಂದಿಗೆ ಗಾಂಧಿಮೈದಾನದಿAದ ಚೌಕಿ, ಕಾವೇರಿ ಹಾಲ್, ರೇಸ್ ಕೋರ್ಸ್ ರಸ್ತೆಯಿಂದ ಮರಳಿ ಗಾಂಧಿ ಮೈದಾನಕ್ಕೆ ಬಂದು ಜಾಥಾ ಮುಕ್ತಾಯಗೊಂಡಿತು. ಮಳೆಯಿಂದ ಜಾಥಾ ಆರಂಭಗೊಳ್ಳುವುದು ಕೊಂಚ ವಿಳಂಬವಾಯಿತು.
ಈ ಸಂದರ್ಭ ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೊಳ್ಳಿ ಸೇರಿದಂತೆ ಸಮಿತಿ ಪದಾಧಿಕಾರಿ, ಸದಸ್ಯರು ಹಾಜರಿದ್ದರು.