ಮಡಿಕೇರಿ, ಸೆ. ೨೭: ಸರಕಾರಿ ಕಾರ್ಯಕ್ರಮ ಸೇರಿದಂತೆ ಎಲ್ಲಾ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರಿನ ಬಳಕೆಯನ್ನು ನಿಷೇಧಿಸಬೇಕು ಮತ್ತು ನಗರಸಭೆ ನಗರದ ೧೦ ಸ್ಥಳಗಳಲ್ಲಿ ಕುಡಿಯುವ ನೀರಿನ ಫಿಲ್ಟರ್ಗಳನ್ನು ಅಳವಡಿಸಬೇಕು ಎಂದು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಚೇಂಬರ್ ಆಫ್ ಕಾಮರ್ಸ್ನ ನಗರಾಧ್ಯಕ್ಷ ಸಂತೋಷ್ ಅಣ್ವೇಕರ್ ಹಾಗೂ ಜಿಲ್ಲಾ ನಿರ್ದೇಶಕ ಧನಂಜಯ ಎಂ. ಅವರು ಸ್ವತಃ ಸರಕಾರದ ಕಾರ್ಯದರ್ಶಿಗಳೇ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರು ಮತ್ತು ಪ್ಲಾಸ್ಟಿಕ್ ಲೋಟಗಳನ್ನು ಬಳಸಬಾರದೆಂದು ಆದೇಶ ಮಾಡಿದ್ದರೂ ಸರಕಾರಿ ಕಾರ್ಯಕ್ರಮಗಳಲ್ಲಿ ಕೂಡ ಇವುಗಳನ್ನು ಬಳಸಲಾಗುತ್ತಿದೆ. ಸ್ವಚ್ಛ ಪರಿಸರಕ್ಕಾಗಿ ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
೨ ಲೀಟರ್ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದಂತೆ ಸಗಟು ವ್ಯಾಪಾರಸ್ಥರು ಹಾಗೂ ಚಿಲ್ಲರೆ ಮಾರಾಟ ಅಂಗಡಿ ಮಾಲೀಕರಲ್ಲಿ ಕಳೆದ ಜನವರಿಯಿಂದ ಮನವಿ ಮಾಡಿಕೊಂಡು ಬರಲಾಗಿದೆ. ಇದೇ ಆ.೧ ರಿಂದ ಈ ನೀರಿನ ಬಾಟಲಿಗಳ ಮಾರಾಟವನ್ನು ನಗರಸಭೆ ಕಡ್ಡಾಯವಾಗಿ ನಿಷೇಧಿಸಿದೆ. ಆದರೆ ನಗರದಲ್ಲಿ ನೀರಿನ ಬಾಟಲ್ಗಳನ್ನು ಮಾರಾಟ ಮತ್ತು ಬಳಕೆ ಮಾಡಲಾಗುತ್ತಿದೆ. ದಸರಾದ ಈ ದಿನಗಳಲ್ಲಿ ಬಾಟಲಿಗಳ ತ್ಯಾಜ್ಯದ ರಾಶಿ ಸುಂದರ ಪರಿಸರಕ್ಕೆ ಹಾನಿ ಉಂಟುಮಾಡುತ್ತಿದೆ ಎಂದಿದ್ದಾರೆ. ನಗರಸಭೆ ಕೂಡ ಪರಿಸರ ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ನಗರದ ೧೦ ಸ್ಥಳಗಳಲ್ಲಿ ಕುಡಿಯುವ ನೀರಿನ ಫಿಲ್ಟರ್ಗಳನ್ನು ಅಳವಡಿಸುವ ಕಾರ್ಯವನ್ನು ಆಯುಧ ಪೂಜೆಯೊಳಗೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.