ಸಿದ್ದಾಪುರ, ಸೆ. ೨೮: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಬೊಳ್ಳರಿ ಮಾಡು, ಪುದುಕೋಟೆ, ದೇವಣಗೇರಿ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದ್ದ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯಿತು. ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಹಾಗೂ ಉಪ ವಲಯ ಅರಣ್ಯ ಅಧಿಕಾರಿ ವಿ.ಜೆ. ರಾಘವ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಈ ಸಂದರ್ಭ ೫ ಕಾಡಾನೆಗಳು ಕಂಡು ಬಂದವು. ಸುರಿಯುತ್ತಿರುವ ಮಳೆ ಹಾಗೂ ಕೆಸರಿನ ನಡುವೆ ಕಾರ್ಯಾಚರಣೆ ತಂಡವು ಕಾಫಿ ತೋಟದೊಳಗೆ ಸುತ್ತಾಡಿ ಕಾರ್ಯಾಚರಣೆ ನಡೆಸಿತು.

ಈ ಸಂದರ್ಭ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡಿಸುತ್ತಾ ಕಾಫಿ ತೋಟದ ಒಳಗಿನಿಂದ ಕಾಡಿಗೆ ತೆರಳಲು ಹಿಂದೇಟು ಹಾಕಿದವು. ಈ ಭಾಗದಲ್ಲಿ ಒಂಟಿ ಸಲಗವೊಂದು ಸುತ್ತಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಮೂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಕಾಡಿಗೆ ಓಡಿಸಿದರು ಕೂಡ ಹಿಂತಿರುಗಿ ಕಾಫಿ ತೋಟದತ್ತ ಲಗ್ಗೆ ಇಡುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಶಿವರಾಮ್, ಉಪ ವಲಯ ಅರಣ್ಯ ಅಧಿಕಾರಿ ರಾಘವ, ಅರಣ್ಯ ಸಿಬ್ಬಂದಿಗಳು, ಆನೆ ಕಾರ್ಯಪಡೆ ಮತ್ತು ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.