ಮಡಿಕೇರಿ, ಸೆ. ೨೮: ಕರ್ನಾಟಕ ರಾಜ್ಯ ಸರಕಾರದ ಸಾಮಾಜಿಕ ಮತ್ತು ಆರ್ಥಿಕ ಗಣತಿ ಸಮೀಕ್ಷೆಯಲ್ಲಿ ಕೊಡವ ಭಾಷಿಕ ೨೧ ಸಮುದಾಯದವರು ಧರ್ಮದ ಕಾಲಂನಲ್ಲಿ ಕೊಡವ, ಜಾತಿಯ ಕಾಲಂನಲ್ಲಿ ಕೊಡವ ಮತ್ತು ಉಪಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಜಾತಿಯ ಹೆಸರನ್ನು ನಮೂದಿಸಬೇಕೆಂದು ಮೂರ್ನಾಡಿನಲ್ಲಿ ನಡೆದ ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ನೀಡಿರುವ ಹೇಳಿಕೆಗೆ ಕೊಡವ ಭಾಷಿಕ ಸಮುದಾಯಗಳ ಕೂಟದ ಸಹಮತವಿಲ್ಲವೆಂದು ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡವ ಭಾಷಿಕ ಸಮುದಾಯಗಳ ಕೂಟ ಮತ್ತು ವಿವಿಧ ಕೊಡವ ಭಾಷಿಕ ಸಮಾಜಗಳ ಪ್ರಮುಖರು ಸಾಧಕ ಬಾಧಕಗಳನ್ನು ಚರ್ಚಿಸಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿಯ ಕಾಲಂನಲ್ಲಿ ಜಾತಿಯ ಹೆಸರನ್ನು, ಭಾಷೆಯ ಕಾಲಂನಲ್ಲಿ ಕೊಡವ ಭಾಷೆ ಮತ್ತು ಉಪಜಾತಿ ಕಾಲಂನಲ್ಲಿ ಯಾವುದೂ ಅನ್ವಯಿಸುವುದಿಲ್ಲ ಎಂದು ನಮೂದಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಸಾಮಾಜಿಕ ಮತ್ತು ಆರ್ಥಿಕ ಗಣತಿ ಕಾರ್ಯದಲ್ಲಿ ಕೊಡವ ಭಾಷಿಕರು ಪಾಲ್ಗೊಳ್ಳುವಂತೆ ಸರಕಾರದ ಪರವಾಗಿ ಕರೆ ನೀಡಬಹುದಾಗಿತ್ತು. ಆದರೆ ಅಧ್ಯಕ್ಷರು ಇಂತಹದ್ದೇ ಧರ್ಮವನ್ನು ನಮೂದಿಸಿ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಕೊಡವ ಸಾಹಿತ್ಯ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೌಕಟ್ಟಿನಲ್ಲಿ ಕೊಡವ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ರಚನೆಗೊಂಡಿರುವ ಸರಕಾರಿ ವ್ಯವಸ್ಥೆಯಾಗಿದೆ. ಆದರೆ ಈ ಚೌಕಟ್ಟನ್ನು ಮೀರಿರುವ ಅಧ್ಯಕ್ಷರು ೨೧ ಕೊಡವ ಭಾಷಿಕ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸುವ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿರುವ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು, ಅಕಾಡೆಮಿ ಅಧ್ಯಕ್ಷರು ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆAದು ಆಗ್ರಹಿಸಿದ್ದಾರೆ.

ಬಬ್ಬೀರ ಸರಸ್ವತಿ ಆಕ್ಷೇಪ

ಮಹೇಶ್ ನಾಚಯ್ಯ ಹೇಳಿಕೆ ನೀಡಿರುವುದು ಖಂಡನೀಯ. ಇವರ ಅಭಿಪ್ರಾಯಕ್ಕೆ ಕೊಡವ ಭಾಷಿಕ ವಿವಿಧ ಸಮುದಾಯದವರ ಒಪ್ಪಿಗೆ ಇಲ್ಲ. ಈಗಾಗಲೇ ಕೊಡವ ಭಾಷಿಕ ಸಮುದಾಯಗಳ ಒಕ್ಕೂಟಗಳು ತೀರ್ಮಾನ ಕೈಗೊಂಡಿದ್ದು, ಇದಕ್ಕೆ ವಿರುದ್ಧವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ನೀಡಿರುವ ಹೇಳಿಕೆ ಕೊಡವ ಭಾಷಿಕರಲ್ಲಿನ ಹಿಂದುತ್ವದ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಅಕಾಡೆಮಿ ಮಾಜಿ ಸದಸ್ಯೆ ಬಬ್ಬೀರ ಸರಸ್ವತಿ ತಿಳಿಸಿದ್ದಾರೆ.

ಹಿಂದೂವೆAದು ಗುರುತಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಗಣತಿ ಕಾರ್ಯದಲ್ಲಿ ಜನಸಾಮಾನ್ಯರು ಉತ್ಸಾಹದಿಂದ ತೊಡಗಿಸಿಕೊಳ್ಳುವಂತೆ ಕರೆ ನೀಡಬೇಕಿತ್ತೇ ಹೊರತು ಇಂತಹದೇ ಧರ್ಮವನ್ನು ನಮೂದಿಸುವಂತೆ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದರು.

ಕೊಡವ ಸಾಹಿತ್ಯ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೈಲಾ ಅನುಸಾರ ಕಾರ್ಯ ನಿರ್ವಹಿಸಲು ಒಂದು ಚೌಕಟ್ಟು ಇದ್ದು ಅದರಂತೆ ಕೊಡವ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಬೆಳಸಲು ಅಕಾಡೆಮಿಯ ಸದಸ್ಯರುಗಳ ಸಹಕಾರದೊಂದಿಗೆ ಅಕಾಡೆಮಿಯನ್ನು ಮುನ್ನಡೆಸುವ ಜವಾಬ್ದಾರಿ ಅಧ್ಯಕ್ಷರದ್ದಾಗಿರುತ್ತದೆ ಎಂದು ತಿಳಿಸಿದ್ದಾರೆ