ವೀರಾಜಪೇಟೆ, ಸೆ. ೨೮: ವೀರಾಜಪೇಟೆ ಸಮೀಪದ ಬೊಳ್ಳರಿಮಾಡು ಗ್ರಾಮ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಜನ ಕಂಗೆಟ್ಟಿದ್ದಾರೆ.

ಬೊಳ್ಳರಿಮಾಡು ಗ್ರಾಮದಲ್ಲಿ ಕಾಡಾನೆ ಹಾಗೂ ಹುಲಿ ಕಾಫಿ ತೋಟದಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ, ರಾತ್ರಿ ವೇಳೆ ಬಿದ್ದಂಡ ಕರುಂಬಯ್ಯ ಅವರ ತೋಟದಲ್ಲಿ ಬಾಳೆ ಗಿಡ ಹಾಗೂ ಸಿ.ಸಿ ಕ್ಯಾಮರಾ, ಕಬ್ಬಿಣದ ಗೇಟ್ ಸೇರಿದಂತೆ ಕಾಫಿ ಗಿಡಗಳನ್ನು ಧ್ವಂಸ ಮಾಡಿದೆ. ಅಲ್ಲದೇ ಲೈನ್ ಮನೆಯ ಬಳಿಯಿದ್ದ ಇನ್ನೊಂದು ತೋಟಕ್ಕೆ ತೆರಳಿದ್ದು, ಲೈನ್‌ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕರು ಜೀವ ಭಯದಲ್ಲಿ ರಾತ್ರಿ ಕಳೆದಿದ್ದಾರೆ.

ಸ್ಥಳೀಯ ಕಾಫಿ ಬೆಳೆಗಾರರಾದ ಬಿದ್ದಂಡ ಮಂದಪ್ಪ ಮಾತನಾಡಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ವನ್ಯಪ್ರಾಣಿಗಳ ಉಪಟಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಗ್ರಾಮದಲ್ಲಿ ವನ್ಯಜೀವಿಗಳ ಹಾವಳಿಯಿಂದ ಯಾವುದೇ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೆ ಅರಣ್ಯ ಇಲಾಖೆ ವನ್ಯಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಕಾಫಿ ಬೆಳೆಗಾರರಾದ ಬಿದ್ದಂಡ ಕರುಂಬಯ್ಯ ಮತ್ತು ಉತ್ತಪ್ಪ ಮಾತನಾಡಿ ಅಧಿಕಾರಿಗಳು ಇನ್ನಿತರರು ಬರುತ್ತಾರೆ ಬಂದು ಆಶ್ವಾಸನೆ ಕೊಟ್ಟು ಹೋಗುತ್ತಾರೆ ಆದರೆ ಯಾವ ಆಶ್ವಾಸನೆಯೂ ಈಡೇರುವುದಿಲ್ಲ ಎಂದರು.

ಅರಣ್ಯ ಇಲಾಖೆಯ ವೀರಾಜಪೇಟೆ ವಿಭಾಗದ ಇಟಿಪಿ, ಆರ್‌ಆರ್‌ಟಿ ವೀರಾಜಪೇಟೆ ಅಮ್ಮತ್ತಿ ಪಾಲಂಗಾಲ ವಲಯದ ಸುಮಾರು ೩೫ ಸಿಬ್ಬಂದಿಗಳು ಅಧಿಕಾರಿಗಳು ಕಾರ್ಯಾಚರಣೆ ಮಾಡಲಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿ ಶಿವರಾಮ್ ತಿಳಿಸಿದ್ದಾರೆ.

ಈ ಸಂದರ್ಭ ಬಿ.ಟಿ ಶಿವರಾಮ್ ರೈ, ಬಿ.ಜಿ ದಿಲೀಪ್ ರೈ, ತಾತೀರ ದಿನೇಶ್ ಕುಮಾರ್, ತಾತೀರ ಜಗದೀಶ್, ಬಿದ್ದಂಡ ಪೊನ್ನಪ್ಪ (ಉತ್ತಪ್ಪ), ಬಿದ್ದಂಡ ಪ್ರಣಾಮ್ ಸೇರಿದಂತೆ ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.