ಚೆಯ್ಯಂಡಾಣೆ, ಸೆ. ೨೮: ಕೊಡಗು ಜಿಲ್ಲೆ ಅತ್ಯಂತ ಶ್ರೀಮಂತಿಕೆಯ ಜಿಲ್ಲೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹರಿಪ್ರಸಾದ್ ಬಿ.ಕೆ. ಅಭಿಪ್ರಾಯಪಟ್ಟರು.

ಯುಎಇಯ ಅನಿವಾಸಿ ಕೊಡಗಿನ ಸಂಘಟನೆಯಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯು.ಎ.ಇ. ಸಮಿತಿ ವತಿಯಿಂದ ದುಬೈನ ಕಿಶಸ್ ವುಡ್ಲೇಮ್ ಪಾರ್ಕ್ ಶಾಲೆಯ ಸಭಾಂಗಣದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ೧೫೦೦ನೇ ಜನ್ಮದಿನಾಚರಣೆಯ ಅಂಗವಾಗಿ “ಕಾರುಣ್ಯದ ಕಡಲು ನಲ್ಮೆಯ ಮಡಿಲು ಪ್ರವಾದಿ (ಸಅ)” ಎಂಬ ಧ್ಯೇಯವಾಕ್ಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಮಿಲಾದ್ ಸಮಾವೇಶ-೨೦೨೫ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನೈಸರ್ಗಿಕವಾಗಿ ಯಥೇಚ್ಛವಾಗಿ ನೈಸರ್ಗಿಕ ಸಂಪತ್ತು ಇರುವ ಜಿಲ್ಲೆ ಕೊಡಗು, ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದ ಜಿಲ್ಲೆ ಕೊಡಗು, ಭಾರತದಲ್ಲಿ ಕಾಶ್ಮೀರ ಬಿಟ್ಟರೆ ಕೊಡಗು ಜಿಲ್ಲೆ ಅತ್ಯಂತ ಸುಂದರ ಜಿಲ್ಲೆ ಎಂದರು.

ಕೊಡಗು ಜಿಲ್ಲೆಯಲ್ಲಿ ನಿರಂತರವಾದ ಸಮಾಜಮುಖಿ ಕಾರ್ಯ ಚಟುವಟಿಕೆಗಳ ಮೂಲಕ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿರುವ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಪ್ರತಿ ವರ್ಷ ಯುಎಇಯ (ದುಬೈ) ಮಣ್ಣಿನಲ್ಲಿ ಪ್ರವಾದಿಯವರ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ.

ಉದ್ಯೋಗ ಮತ್ತು ವ್ಯವಹಾರದ ಮೂಲಕ ಬದುಕು ಕಟ್ಟಿಕೊಳ್ಳಲು ವಿದೇಶಕ್ಕೆ ಬಂದು ಕಷ್ಟಪಟ್ಟು ದುಡಿದ ಆದಾಯದ ಒಂದು ಪಾಲನ್ನು ತಮ್ಮ ತಾಯಿನಾಡಿಗೆ ನೀಡುತ್ತಿರುವುದು ಇಡೀ ಕೊಡಗು ಜಿಲ್ಲೆಗೆ ಮಾದರಿ ಸಂಘಟನೆಯಾಗಿದೆ ಎಂದು ಶ್ಲಾಘಿಸಿದರು.

ಸಮಾವೇಶದ ಸಾನಿಧ್ಯ ವಹಿಸಿದ್ದ ಹಿರಿಯ ಧಾರ್ಮಿಕ ವಿದ್ವಾಂಸರಾದ ಸಯ್ಯದ್ ಖಲೀಲ್ ಇಬ್ರಾಹಿಂ ಬುಖಾರಿ ತಂಙಳ್ ಕಡಲುಂಡಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದರು.

ಮೀಲಾದ್ ಸಮಾವೇಶದಲ್ಲಿ ಮುಖ್ಯ ಭಾಷಣಗಾರರಾದ ಮೊಹಮ್ಮದ್ ರಾಫಿ ಹಿಮಾಮಿ ಸಖಾಫಿ ಅಯ್ಯಂಗೇರಿ (ದೇರಳಕಟ್ಟೆ) ಪ್ರವಾದಿ ಮುಹಮ್ಮದರ ಆದರ್ಶ ಜೀವನದ ಬಗ್ಗೆ ಮುಖ್ಯ ಪ್ರಭಾಷಣ ನಡೆಸಿದರು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್‌ನ ಜಿಸಿಸಿ ಅಧ್ಯಕ್ಷ ಹಾಗೂ ಮಿಲಾದ್ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಹೆಚ್.ಎ. ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದಕ್ಕೂ ಮೊದಲು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಮೌಲಾನ ಶಾಫಿ ಸಅದಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಹಂಸ ಕೊಟ್ಟಮುಡಿ, ಅಬ್ದುಲ್ ಲತೀಫ್ ಸುಂಟಿಕೊಪ್ಪ, ಸಿಪಿಎಂ ಬಶೀರ್ ಹಾಜಿ ಗೋಣಿಕೊಪ್ಪ, ಕೆ.ಎ. ಬಶೀರ್ ಹಾಜಿ ಎಡಪಾಲ, ಜಲೀಲ್ ನಿಝಾಮಿ, ಮುಹಮ್ಮದ್(ಮಾಣುಕ್ಕ) ಎಮ್ಮೆಮಾಡು, ದುಬೈನ ಉದ್ಯಮಿ ಅಶ್ರಫ್ ಎಮ್ಮೆಮಾಡು, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಕೊಡಗು ಸುನ್ನಿ ವೆಲ್ಫೇರ್ ಯುಎಇ ಸಂಚಾಲಕರಾದ ಇಸ್ಮಾಯಿಲ್ ಮೂರ್ನಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ದುಬೈ ಮಿಲಾದ್ ಸಮಾವೇಶದ ಅಂಗವಾಗಿ ಕೊಡಗಿನ ಅನಿವಾಸಿಗಳಿಗೆ ಮತ್ತು ಅವರ ಮಕ್ಕಳಿಗಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಅಧ್ಯಕ್ಷ ಅಹ್ಮದ್ ಚಾಮಿಯಾಲ, ಸುನ್ನಿ ಸಂಘಟನೆಗಳ ಪ್ರಮುಖರಾದ ಶಾಫಿ ಸಖಾಫಿ ಕೊಂಡAಗೇರಿ, ರಫೀಕ್ ಹಾಜಿ ಚಾಮಿಯಾಲ,ಇಬ್ರಾಹಿಂ ನಾಪೋಕ್ಲು, ಝಮೀರ್ ಬೆಂಗಳೂರು, ಕೆ.ಎಸ್.ಡಬ್ಲ್ಯೂ.ಎ. ಪದಾಧಿಕಾರಿಗಳಾದ ಹಮೀದ್ ನಾಪೋಕ್ಲು, ನಾಸರ್ ನಹಿಮಿ, ಆಲಿ ಎಮ್ಮೆಮಾಡು, ನಾಸಿರ್ ಕುಂಜಿಲ, ಮುಜೀಬ್ ಕಡಂಗ, ನಿಸಾರ್ ಗುಂಡಿಕೆರೆ, ಮುಝಮ್ಮಿಲ್ ಚಾಮಿಯಲ್, ಅಶ್ರಫ್ ಕುಂಜಿಲ, ಜುಬೈರ್ ಎಮ್ಮೆಮಾಡು, ಜಮಾಲ್ ಕುಂಜಿಲ, ಶಫೀಕ್ ಹಿಶಾಮಿ, ಮತಿತ್ತರರು ಉಪಸ್ಥಿತರಿದ್ದರು. ಅಶ್ಪಾಕ್ ಚೋಕಂಡಳ್ಳಿ ಸ್ವಾಗತಿಸಿ, ರಿಯಾಜ್ ಕೊಂಡAಗೇರಿ ಕಾರ್ಯಕ್ರಮ ನಿರೂಪಿಸಿದರೆ, ಜುಬೈರ್ ಎಮ್ಮೆಮಾಡು ವಂದಿಸಿದರು.