ನಾಪೋಕ್ಲು, ಸೆ. ೨೯: ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ೧೯೮೨ರ ಶೈಕ್ಷಣಿಕ ವರ್ಷವನ್ನು ಪೂರೈಸಿದ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಸಂತೋಷ ಕೂಟ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಿತು.
೨೦೨೧ರಲ್ಲಿ ಪ್ರಾರಂಭಗೊAಡ ಹಳೆಯ ವಿದ್ಯಾರ್ಥಿಗಳ ಸಂತೋಷ ಕೂಟ ಹಲವು ವಿವಿಧತೆಗಳೊಂದಿಗೆ ನಡೆದುಬಂದಿದ್ದು ಇದೀಗ ಐದನೇ ವರ್ಷದ ಆಚರಣೆ ಸಂಭ್ರಮ ಸಡಗರದಿಂದ ಜರುಗಿತು. ವಯಸ್ಸು ೬೫ರ ಆಸುಪಾಸಿನಲ್ಲಿದ್ದ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು, ಆ ಅಭೂತಪೂರ್ವ ಪುನರ್ಮಿಲನಕ್ಕೆ ಒಂದು ವಿಶೇಷ ಮೆರುಗನ್ನು ನೀಡಿತು. ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿವಿಧ ಆಟೋಟ ಮತ್ತು ಮನೋರಂಜನಾ ಚಟುವಟಿಕೆ ಮತ್ತು ಸ್ಪರ್ಧೆಗಳಲ್ಲಿ ತಮ್ಮ ದಿನದ ಜಂಜಾಟವನ್ನು ಮರೆತು ಕುಣಿದು ಸಂಭ್ರಮಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಹಳೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಂಡAಡ ಸಿ. ನಾಣಯ್ಯ ತಮ್ಮ ಕಾಲೇಜು ದಿವಸಗಳ ಗತವೈಭವವನ್ನು ಮೆಲುಕು ಹಾಕುತ್ತಾ, ತಮ್ಮ ಸಹಪಾಠಿಗಳ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ಶ್ಲಾಘಿಸುತ್ತಾ ಅವರು ಮಾಡುತ್ತಿರುವ ಸೇವೆಯನ್ನೂ ಸ್ಮರಿಸಿದರು. ಈ ಸಂತೋಷ ಕೂಟ ಕೇವಲ ಸಂಭ್ರಮಕ್ಕೆ ಮೀಸಲಾಗಿರದೆ, ಮುಂದಿನ ದಿನಗಳಲ್ಲಿ ಬಲಿಷ್ಠ ಹಾಗೂ ಸಮೃದ್ಧ ಸಮಾಜವನ್ನು ಕಟ್ಟುವ ಪರಿಕಲ್ಪನೆಯಡಿಯಲ್ಲಿ ಸಂಕಲ್ಪವನ್ನು ಮಾಡಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಹಳೆಯ ವಿಜ್ಞಾನ ವಿದ್ಯಾರ್ಥಿನಿ ನವೀನ್, ಶ್ರೀಧರ್ ಹಾಗೂ ಉದ್ಯಮಿ ಗಣೇಶ ಎಸ್.ಎಚ್. ಮಾತನಾಡಿ ಇದುವರೆಗೆ ವ್ಯವಸ್ಥಿತವಾಗಿ ನಡೆದ ಈ ಸಂತೋಷ ಕೂಟ ಇನ್ನೂ ಹಲವಷ್ಟು ವರುಷಗಳ ಕಾಲ ನಡೆಯುವಂತಾಗಬೇಕು ಮತ್ತು ನಾವು ಈ ಸಮಾಜದ ಆದರ್ಶ ಪ್ರಜೆಗಳಾಗಿ ಬದುಕಬೇಕು ಎಂದರು.
ಕಾರ್ಯಕ್ರಮದ ಆಯೋಜಕರಾದ ಹಳೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾಣತಂಡ ಕುಟ್ಟಪ್ಪ ನವರ ಕಾರ್ಯತತ್ಪರತೆ, ಶ್ರಮ ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಹಳೆಯ ಕಲಾ ವಿಭಾಗದ ವಿದ್ಯಾರ್ಥಿನಿ, ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಚೋಕಿರ ಪವಿತ್ರ ಮಾಡಿ ನಿರೂಪಣೆಯನ್ನು ಹಳೆಯ ಕಲಾ ವಿಭಾಗದ ವಿದ್ಯಾರ್ಥಿನಿ, ಪ್ರಸ್ತುತ ಬ್ರಹ್ಮಗಿರಿ ಪತ್ರಿಕೆಯ ಸಹ ಸಂಪಾದಕಿಯೂ ಆಗಿರುವ ಉಳ್ಳಿಯಡ ಡಾಟಿ ಪೂವಯ್ಯ ನೆರವೇರಿಸಿದರು.
ಮುಂದಿನ ವರುಷದ ಕಾರ್ಯಕ್ರಮದ ಸಂಚಾಲಕರಾಗಿ ಹಳೆಯ ಕಲಾ ವಿಭಾಗದ ವಿದ್ಯಾರ್ಥಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ ಆಯ್ಕೆ ಆದರು.