ಸೋಮವಾರಪೇಟೆ, ಸೆ. ೩೦: ತಾಲೂಕು ಕಚೇರಿ ಸಭಾಂಗಣದಲ್ಲಿ ಅ.೭ರಂದು ನಡೆಸಲು ಉದ್ದೇಶಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ಪೂರ್ವಭಾವಿ ಸಭೆ ತಹಶೀಲ್ದಾರ್ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ಪರಿಶಿಷ್ಟ ಪಂಗಡಕ್ಕೆ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರಿದ್ದು, ಯಾರಿಗೂ ಸಭೆಯ ಮಾಹಿತಿ ನೀಡದ ಬಗ್ಗೆ ಸಮಾಜದ ಮುಖಂಡ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲ ಧರ್ಮದವರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಮಾಡಬೇಕು ಎಂದು ಅವರು ತಿಳಿಸಿದರು.

ತೋಳೂರು ಶೆಟ್ಟಳ್ಳಿಯ ಸುರೇಶ್ ಮಾತನಾಡಿ, ಸರ್ಕಾರ ಹಲವು ಮಹನೀಯರ ಆಚರಣೆಗಳನ್ನು ಸರ್ಕಾರಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸೇರಿ ಆಚರಿಸಲು ವ್ಯವಸ್ಥೆ ಮಾಡಿದೆ. ಆದರೆ, ಯಾವುದೇ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸರ್ಕಾರಿ ಸಿಬ್ಬಂದಿಗಳು ಕಾಣಲು ಸಿಗುವುದಿಲ್ಲ. ಅಂದು ಪೂರ್ತಿ ರಜೆಯನ್ನು ತಮ್ಮ ಸ್ವಂತ ಕೆಲಸಕ್ಕೆ ಕಳೆಯುತ್ತಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಬಾರದು. ಎಂದರು.

ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಹಿಂದಿನ ಸಾಲಿನಲ್ಲಿ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಒಟ್ಟಾಗಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ಬಾರಿ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿಯೇ ಎಲ್ಲರೂ ಸೇರಿ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು. ಒಬ್ಬ ಮುಖ್ಯ ಭಾಷಣಕಾರರಿಂದ ಭಾಷಣ, ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವಂತೆ ಸಭೆಗೆ ತಿಳಿಸಿದರು.

ಸಭೆಯಲ್ಲಿ ಕೆ.ಡಿ.ಪಿ. ಸದಸ್ಯ ವೇದಕುಮಾರ್, ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ದಿವಿಲ್‌ಕುಮಾರ್, ದಲಿತ ಮುಖಂಡ ಜಯಪ್ಪ ಹಾನಗಲ್ಲು, ಹೊನ್ನಪ್ಪ, ಚಿಕ್ಕ ಅಳುವಾರ ಸ್ನಾತಕ್ಕೋತರ ಕಾಲೇಜಿನ ಪ್ರೊಫೆಸರ್ ಡಾ. ಧರ್ಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧೇಗೌಡ, ಜಿಲ್ಲಾ ಪಂಚಾಯಿತಿ ಎ.ಇ.ಇ. ನಾರಾಯಣಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.