ಸೋಮವಾರಪೇಟೆ,ಸೆ. ೩೦: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ೪೯ನೇ ವರ್ಷದ ಅದ್ದೂರಿ ಆಯುಧ ಪೂಜಾ ಕಾರ್ಯಕ್ರಮವು ಜನೋತ್ಸವ ಮಾದರಿಯಲ್ಲಿ ನಡೆದು, ಜನಮನಸೂರೆಗೊಂಡಿತು.
ಕಳೆದ ೪೯ ವರ್ಷಗಳಿಂದ ಸೋಮವಾರಪೇಟೆ ಭಾಗದ ದಸರಾ ಉತ್ಸವ ಎಂದೇ ಪರಿಗಣಿಸಲ್ಪಟ್ಟಿರುವ ಮೋಟಾರ್ ಯೂನಿಯನ್ನ ಆಯುಧ ಪೂಜೋತ್ಸವ, ನೃತ್ಯ ಸ್ಪರ್ಧೆ, ಸಂಗೀತ ರಸಮಂಜರಿ ಕಾರ್ಯಕ್ರಮಗಳು ಹಬ್ಬದ ಸಂಭ್ರಮಕ್ಕೆ ಹೆಚ್ಚಿನ ಮೆರುಗು ತಂದಿತ್ತು. ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಪಟ್ಟಣ ಮಾತ್ರವಲ್ಲದೇ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಉದ್ಘಾಟನೆ: ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿAದ ಆಯೋಜಿಸಿದ್ದ ೪೯ನೇ ವರ್ಷದ ಆಯುಧ ಪೂಜೋತ್ಸವಕ್ಕೆ ಚಾಲನೆ ನೀಡಿದ ಮಾಜೀ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಾಮೂಹಿಕವಾಗಿ ಆಚರಿಸಲ್ಪಡುವ ಹಬ್ಬಗಳು ಸಾಮರಸ್ಯದ ಸಂಕೇತವಾಗಿವೆ ಎಂದು ಅಭಿಪ್ರಾಯಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಯುವ ಜನಾಂಗ ಹಬ್ಬಾಚರಣೆಗಳ ಬಗ್ಗೆ ತಿಳಿದುಕೊಂಡು ಮುಂದುವರೆಸಿಕೊAಡು ಹೋಗಬೇಕು ಎಂದರು. ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ಸಂಘಟನೆಯಿAದ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ.
ನಾನು ನನ್ನಿಂದಲೇ ಎಂಬುದನ್ನು ಮರೆತು ಒಗ್ಗಟ್ಟಿನಿಂದ ಸೇವೆ ಸಲ್ಲಿಸಿದರೆ ಸಮಾಜಕ್ಕೆ ಉಪಯೋಗವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಶೀಲಾ ಡಿಸೋಜ, ಬಿ.ಆರ್. ಮಹೇಶ್, ಸಾರ್ವಜನಿಕ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ವಿ.ಎಸ್.ಎಸ್.ಎನ್. ಸದಸ್ಯ ಪಿ.ಕೆ. ರವಿ, ಪ್ರವೀಣ್ ಶೆಟ್ಟಿ ಬಣದ ಕರವೇ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ರೋಟರಿ ಅಧ್ಯಕ್ಷ ಪೊನ್ನಪ್ಪ, ಪ್ರಮುಖರಾದ ಎ.ಪಿ. ವೀರರಾಜು, ಹೆಚ್.ಆರ್. ಹರೀಶ್ ಕುಮಾರ್, ಲೋಕಾನಂದ, ಆದರ್ಶ್, ರಾಘವ, ಸಂಪತ್, ರೋಹಿತ್ ಪೂಜಾರಿ, ಕೆ.ಟಿ.ಡಿ.ಓ. ಅಧ್ಯಕ್ಷ ವಸಂತ್, ಆಟೋ ಯೂನಿಯನ್ ಅಧ್ಯಕ್ಷ ಉಮೇಶ್, ಜೇಸೀ ಮಾಜಿ ಅಧ್ಯಕ್ಷೆ ಎಂ.ಎ. ರುಬೀನಾ ಸೇರಿದಂತೆ ಇತರರು ಇದ್ದರು.
ನಿಶ್ಚಿತ ಪ್ರಾರ್ಥಿಸಿ, ಸಂಘದ ಗೌರವಾಧ್ಯಕ್ಷ ಕೆ.ಜಿ. ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು. ಪ್ರ.ಕಾರ್ಯದರ್ಶಿ ಮಣಿ ಕುಶಾಲಪ್ಪ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ವೀರೇಶ್, ವಿನ್ಸಿ ಡಿಸೋಜ ಅವರುಗಳನ್ನು ಸನ್ಮಾನಿಸಲಾಯಿತು.
ಜನಮನಸೂರೆಗೊಂಡ ನೃತ್ಯ ಸ್ಪರ್ಧೆ: ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಮೂಡಿಬಂದ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ಜನಮನಸೂರೆಗೊಂಡಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಪ್ರಸ್ತುತಪಡಿಸಿದ ನೃತ್ಯ ಕಾರ್ಯಕ್ರಮ ಅಮೋಘವಾಗಿತ್ತು. ಸಾವಿರಾರು ಮಂದಿ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಕಲಾವಿದರನ್ನು ಪ್ರೋತ್ಸಾಹಿಸಿದರು.
ಮಧ್ಯಾಹ್ನ ಪಟ್ಟಣದ ಜೇಸೀ ವೇದಿಕೆ ಬಳಿಯಲ್ಲಿ ಅನ್ನಸಂತರ್ಪಣೆ ನಡೆಯಿತು. ನಂತರ ನೃತ್ಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಕಲಾತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಸಂಗೀತದ ಸುಧೆ ಹರಿಸಿದ ಗುರುಕಿರಣ್ ತಂಡ: ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಹಿನ್ನೆಲೆ ಗಾಯಕ, ನಟ ಗುರುಕಿರಣ್ ತಂಡದಿAದ ಮೂಡಿಬಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜನಮನಸೂರೆಗೊಂಡಿತು. ಉದಯೋನ್ಮುಖ ಕಲಾವಿದರು ಹರಿಸಿದ ಸಂಗೀತ ಸುಧೆಗೆ ಯುವ ಜನಾಂಗ ಹೆಜ್ಜೆ ಹಾಕಿ ಸಂಭ್ರಮಿಸಿತು. ಮಕ್ಕಳಿಂದ ಹಿಡಿದು ವಯೋವೃದ್ಧರೂ ಸಹ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಆಯುಧ ಪೂಜೋತ್ಸವ ಅಂಗವಾಗಿ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಸದಸ್ಯರಿಗೆ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದರೊಂದಿಗೆ ಅಲಂಕೃತ ವಾಹನಗಳ ಸ್ಪರ್ಧೆಯನ್ನು ಆಯೋಜಿಸಿ, ವಿಜೇತರಿಗೆ ಪ್ರಶಸ್ತಿಯೊಂದಿಗೆ ಬಹುಮಾನ ನೀಡಲಾಯಿತು. ಸಂಘದ ಪದಾಧಿಕಾರಿಗಳು ೪೯ನೇ ವರ್ಷದ ಅದ್ದೂರಿ ಆಯುಧ ಪೂಜೋತ್ಸವದ ಯಶಸ್ಸಿಗೆ ಶ್ರಮಿಸಿದರು.