ಪೊನ್ನಂಪೇಟೆ, ಅ. ೩: ಗೋಣಿಕೊಪ್ಪಲು ನಾಡಹಬ್ಬ ದಸರಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಸ್ತಬ್ಧಚಿತ್ರಗಳ ಮೆರವಣಿಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರ ಮನಸೂರೆಗೊಳಿಸಿತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಮುಖ್ಯ ರಸ್ತೆಯ ಮೂಲಕ ಉಮಾಮಹೇಶ್ವರಿ ದೇವಸ್ಥಾನದವರೆಗೆ ಸಾಗಿಬಂದ ಸ್ತಬ್ಧಚಿತ್ರ ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದ ಜನಸ್ತೋಮ ವೀಕ್ಷಣೆ ಮಾಡಿತು.

ಗೋಣಿಕೊಪ್ಪಲು ಸರ್ವಂ ಸಮಿತಿಯವರು ನಿರ್ಮಿಸಿದ್ದ ದೇಶ ಭಕ್ತಿ ಬಿಂಬಿಸುವ ಆಪರೇಷನ್ ಸಿಂಧೂರ ಸ್ತಬ್ಧಚಿತ್ರ ಉಗ್ರ ನರಸಿಂಹನ ಪೌರಾಣಿಕ ಚಿತ್ರ ದೊಂದಿಗೆ, ಉಗ್ರ ನರಸಿಂಹನAತೆ ನಮ್ಮ ಸೈನಿಕರು ಪಾಕಿಸ್ತಾನಿ ಉಗ್ರರನ್ನು ಸಂಹರಿಸಿದರು ಎಂದು ಸೂಚಿಸುವಂತಿತ್ತು. ಭಾರತದ ದಿಟ್ಟ ಹೋರಾಟಕ್ಕೆ ಪಾಕ್ ಮಣ್ಣು ಮುಕ್ಕಿದ ರೀತಿಯನ್ನು ಬಿಂಬಿಸಲಾಗಿತ್ತು. ಮೂರು ವಾಹನ ಬಳಸಿ ಎರಡು ಕಡೆಗಳಲ್ಲಿ ಭಾರತ ಮತ್ತು ಪಾಕ್ ಸಮರದ ಚಿತ್ರಣ ಮೂಡಿಸಲಾಗಿತ್ತು. ಪ್ಲಾಸ್ಟಿಕ್ ಬಳಸದೆ ಬಟ್ಟೆಯಿಂದ ರೂಪಿಸಿದ್ದ ಚಿತ್ರ ಪರಿಸರ ಪ್ರೇಮ ಮತ್ತು ದೇಶಭಕ್ತಿಗೆ ಸಾಕ್ಷಿಯಾಯಿತು. ಹಿಂದು, ಮುಸ್ಲಿಂ, ಕ್ರೈಸ್ತ ಎಂಬ ಸಂಘರ್ಷಗಳಿಗಿAತ ನಾನು ಭಾರತೀಯನೆಂಬ ಪರಿಕಲ್ಪನೆ ಇರಲಿ ಎಂಬ ಘೋಷವಾಕ್ಯ ಗಮನ ಸೆಳೆಯಿತು.

ಗೋಣಿಕೊಪ್ಪದ ಭಗತ್ ಸಿಂಗ್ ಯುವಕರ ಸಂಘ, ಯುವ ಪೀಳಿಗೆಯನ್ನು ಮೃತ್ಯುಕೂಪಕ್ಕೆ ಕೊಂಡೊಯ್ಯುತ್ತಿರುವ ಮಾದಕ ವಸ್ತುವಿನ ಬಗ್ಗೆ ಸಾಮಾಜಿಕ ಕಳಕಳಿಯ ಚಿತ್ರದ ಮೂಲಕ ಗಮನ ಸೆಳೆಯಿತು. ಮಾದಕ ವಸ್ತು ಎದೆ, ಮೆದುಳನ್ನೇ ನಾಶ ಮಾಡುತ್ತದೆ ಎಂಬ ಅರ್ಥಗರ್ಭಿತ ಚಿತ್ರ ಇಂದಿನ ಸಮಾಜಕ್ಕೆ ಮಾದಕ ವಸ್ತುವಿನ ದುಷ್ಪರಿಣಾಮದ ಬಗ್ಗೆ ಒತ್ತಿ ಹೇಳುವಂತಿತ್ತು. ಅಕ್ಟೋಪಸ್ ಚಿತ್ರದೊಂದಿಗೆ ಮಾದಕವಸ್ತುವಿನಿಂದಾಗುವ ಅನಾಹುತವನ್ನು ಕಟ್ಟಿ ಕೊಡುವ ಮೂಲಕ ಮಾದಕ ವಸ್ತುಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುವ ಯುವಕರಿಗೆ ಎಚ್ಚರಿಕೆಯ ಸಂದೇಶವನ್ನು ಸಾರುತ್ತಿತ್ತು.

ಪೊನ್ನಂಪೇಟೆ ಗೆಳೆಯರ ಬಳಗ ನಿರ್ಮಿಸಿದ್ದ ಕೊಪ್ಪಳ ಜಿಲ್ಲೆಯ ಕುಣಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ತಬ್ದ ಚಿತ್ರ ಶಿಕ್ಷಣ ಪ್ರೇಮಿಗಳ ಮೆಚ್ಚುಗೆ ಪಡೆಯಿತು. ಬಡಮಕ್ಕಳಿಗೆ ಶಾಲೆ ಕಟ್ಟಿಸಲು, ಹುಚ್ಚಮ್ಮ ಚೌದರಿ ಎಂಬ ಮಹಿಳೆ ತನ್ನ ಬದುಕಿಗೆ ಆಸರೆಯಾಗಿದ್ದ ೨ ಎಕರೆ ಜಾಗವನ್ನು ದಾನವಾಗಿ ನೀಡಿ, ಅದೇ ಶಾಲೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿ, ತಾನು ಗುಡಿಸಲಲ್ಲಿ ವಾಸಿಸುತ್ತಾ, ಊರಿನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮಾಡಿದ ಸೇವೆಯನ್ನು ಸ್ತಬ್ಧ ಚಿತ್ರದ ಮೂಲಕ ಸ್ಮರಿಸಿಕೊಂಡು ಹುಚ್ಚಮ್ಮನಿಗೊಂದು ಸಲಾಂ ಹೇಳಲಾಯಿತು.

ಕೈಕೇರಿಯ ಪರಿಸರ ಪ್ರೇಮಿ ಬಳಗದವÀರು ನಿರ್ಮಿಸಿದ್ದ ಮಾದಕ ವಸ್ತುಗಳ ಮಾಯಾಜಾಲ ಸ್ತಬ್ಧಚಿತ್ರ ಪರಿಸರ ನೈರ್ಮಲ್ಯ ಮತ್ತು ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮ ಕುರಿತು ಬೆಳಕು ಚೆಲ್ಲುವ ಮೂಲಕ ಸಿಗರೇಟು ,ಪಾನ್ ಗುಟ್ಕಗಳ ಬಳಕೆ ನಿಷೇಧಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಸಂದೇಶವನ್ನು ಸಾರಿತು.

ಲೋಪ ಮುದ್ರಾ ಮಹಿಳಾ ಸಮಿತಿ ನಿರ್ಮಿಸಿದ ಸ್ತಬ್ಧಚಿತ್ರ ಆರ್ ಎಸ್ ಎಸ್ ಸಂಘಕ್ಕೆ ನೂರು ವರ್ಷದ ಸಂಭ್ರಮ ಜೊತೆಗೆ ಆರ್ ಎಸ್ ಎಸ್ ಕಾರ್ಯಕರ್ತರ ಶ್ರಮ, ದೇಶದ ಪ್ರಗತಿಯ ಪರಿಚಯಾತ್ಮಕ ಚಿತ್ರಗಳು, ಪ್ರಸ್ತುತ ವಿದ್ಯಮಾನವನ್ನು ಬಿಂಬಿಸಿತು. ಗೋಣಿಕೊಪ್ಪದ ಐಕ್ಯಂ ೧೧೧ ಯವಸೇನ ಚಾರಿಟೇಬಲ್ ಟ್ರಸ್ಟ್, ನಿರ್ಮಿಸಿದ್ದ ಸ್ತಬ್ಧಚಿತ್ರ, ವಯಸ್ಕರನ್ನು ವೃದ್ಧಾಶ್ರಮಕ್ಕೆ ತಳ್ಳದಿರಿ, ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿ, ವ್ಯಸನದಿಂದ ನಾಶ ಸೇವೆಯಿಂದ ಜಯ ಎಂಬ ವಾಕ್ಯಗಳೊಂದಿಗೆ ಗಮನ ಸೆಳೆಯಿತು.

ಹೊಸತನವಿಲ್ಲದ ಇಲಾಖೆಯ ಸ್ತಬ್ಧಚಿತ್ರಗಳು

ವಿವಿಧ ಇಲಾಖೆಯ ೮ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ತೋಟಗಾರಿಕೆ ಇಲಾಖೆಯ ಸ್ತಬ್ಧಚಿತ್ರ ಒಂದಷ್ಟು ವಿವಿಧ ಗಿಡಗಳೊಂದಿಗೆ ಮೆರವಣಿಗೆ ತೆರಳಿತು.

ಶಿಕ್ಷಣ ಇಲಾಖೆಯ ಬದಲಾವಣೆಯ ಶಿಕ್ಷಣ ಭವಿಷ್ಯದ ನಿರ್ಮಾಣ, ತಾಲೂಕು ಪಂಚಾಯಿತಿಯ ನಮ್ಮ ತಾಲೂಕು ನಮ್ಮ ಪ್ರಗತಿ, ನರೇಗ ಮತ್ತು ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ ಮಿಷನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳು ಯಾವುದೇ ರೀತಿಯ ಹೊಸತನ, ಕ್ರಿಯಾಶೀಲತೆ ಅಳವಡಿಸಿಕೊಳ್ಳದೆ, ಕೇವಲ ಬ್ಯಾನರ್ ಗಳನ್ನಷ್ಟೇ ಅಳವಡಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡವು. ಆರೋಗ್ಯ ಇಲಾಖೆಯ ತಾಯಿ ಹಾಲು ಮಹತ್ವದ ಸಂದೇಶ ನೋಡುಗರ ಗಮನ ಸೆಳೆಯಿತು. ಸುಮಾರು ೨೨ ಇಲಾಖೆಗಳಲ್ಲಿ ಕೇವಲ ಎಂಟು ಇಲಾಖೆಗಳಷ್ಟೇ ಭಾಗವಹಿಸಿರುವ ಬಗೆಯೂ ಆಕ್ಷೇಪ ವ್ಯಕ್ತವಾಯಿತು.

ನಾಡಹಬ್ಬ ದಸರಾ ಸಮಿತಿ ಪೌರಾಣಿಕ ಮತ್ತು ಸಾಮಾಜಿಕ ಎಂಬ ಎರಡು ವಿಭಾಗಗಳಲ್ಲಿ ಸ್ತಬ್ಧಚಿತ್ರ ಸ್ಪರ್ಧೆಯನ್ನು ಏರ್ಪಡಿಸಿತ್ತು.ಆದರೆ ಹೆಚ್ಚಾಗಿ ಸಾಮಾಜಿಕ ವಿಚಾರಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆ ಇತ್ತು. ಪೌರಾಣಿಕ ಹಿನ್ನೆಲೆಯ ಸ್ತಬ್ಧಚಿತ್ರಗಳ ಕೊರತೆ ಕಾಣುತ್ತಿತ್ತು.

ಮೆರವಣಿಗೆ ವೀಕ್ಷಿಸಲು ನಿರೀಕ್ಷೆಗೂ ಮೀರಿ ಜನಸಮೂಹ ಪಟ್ಟಣದಲ್ಲಿ ಜಮಾಯಿಸಿತ್ತು. ಆದರೆ ಕೇವಲ ೧೪ ಸ್ತಬ್ಧ ಚಿತ್ರಗಳ ಪ್ರದರ್ಶನ ಕಂಡು ನಿರಾಸರಾದರು.

ಡಿಜೆಯ ಅಬ್ಬರವಿಲ್ಲದೆ ನಡೆದ ಮೆರವಣಿಗೆಯಲ್ಲಿ ಬಂಟ್ವಾಳದ ಓಂಕಾರ ಭಜನಾ ನೃತ್ಯ, ಕೇರಳದ ಗೊಂಬೆಗಳು, ಕೊಡವ ವಾಲಗ, ಭಗತ್ ಸಿಂಗ್ ಮಹಿಳಾ ವಿಂಗ್, ಚಂಡೆ ಸೆಟ್, ಲೋಪಮುದ್ರ ಮಹಿಳಾ ಸಮಿತಿ ಬ್ಯಾಂಡ್ ಸೆಟ್‌ಗಳ ಮೆರವಣಿಗೆ ಆಕರ್ಷಣೀಯವಾಗಿತ್ತು. ಪೊಲೀಸರ ಸೂಕ್ತ ಬಂದೋಬಸ್ತ್ ವ್ಯವಸ್ಥೆಯಲ್ಲಿ ಸ್ತಬ್ಧ ಚಿತ್ರ ಮೆರವಣಿಗೆ ಸಾಂಗವಾಗಿ ನೆರವೇರಿತು.

ಸ್ತಬ್ಧಚಿತ್ರ ಉದ್ಘಾಟನೆ

ಸರ್ಕಾರಿ ಇಲಾಖೆಯ ೮ ಸ್ತಬ್ಧಚಿತ್ರಗಳು ಹಾಗೂ ಸಂಘ ಸಂಸ್ಥೆಗಳ ೬ ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು ೧೪ ಸ್ತಬ್ಧಚಿತ್ರಗನ್ನೊಳಗೊಂಡ ಮೆರವಣಿಗೆ ಉದ್ಯಮಿ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಮತ್ತು ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ನಾಗೇಂದ್ರ ಪ್ರಸಾದ್ ಆರ್ ಎಂ ಸಿ ಚಾಲನೆ ನೀಡಿದರು. ನಾಡಹಬ್ಬ ದಸರಾ ಸಮಿತಿ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ, ಕಾರ್ಯದರ್ಶಿ ಸುದರ್ಶನ್ ಬಾರಿತ್ತಾಯ, ಕಾವೇರಿ ದಸರಾ ಸಮಿತಿ ಗೌರವ ಸಲಹೆಗಾರ ಬಿ.ಎನ್ ಪ್ರಕಾಶ್ ಸೇರಿದಂತೆ ಸಮಿತಿ ಸದಸ್ಯರುಗಳು ಹಾಜರಿದ್ದರು.