ಕೂಡಿಗೆ, ಅ. ೩: ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಕುವುದರ ಮೂಲಕ ಸಂಘದ ಅಭಿವೃದ್ಧಿ ಮತ್ತು ಉತ್ತಮವಾಗಿ ಹಾಲಿನ ಬೆಲೆಯು ದೊರೆಯುತ್ತಿರುವ ಹಿನ್ನೆಲೆಯಲ್ಲಿ ರೈತರು ಆರ್ಥಿಕವಾಗಿ ಮುಂದುವರೆಯುವುದರ ಜೊತೆಯಲ್ಲಿ ಸಹಕಾರ ಸಂಘವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ್ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.

ಜೇನುಕಲ್ಲು ಬೆಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೪-೨೫ ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.

ಮುಖ್ಯ ಅತಿಥಿಯಾಗಿ ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವೀಣಾ ರವರು ಪಶುಪಾಲನೆ ಮತ್ತು ಯೋಜನೆಯ ಸವಿಸ್ತಾರವಾದ ಮಾಹಿತಿ, ಪಶು ಚಿಕಿತ್ಸೆಗೆ ವಿಶೇಷ ಶಿಬಿರದ ಮೂಲಕ ಚಿಕಿತ್ಸೆ ನೀಡುವ ಬಗ್ಗೆ ರೈತರಿಗೆ ಒದಗಿಸಿದರು. ಸಭೆಯಲ್ಲಿ ಹಾಜರಿದ್ದ ನೂರಾರು ಸಂಘದ ಸದಸ್ಯರು ಪಶು ಚಿಕಿತ್ಸೆಗೆ ಒಕ್ಕೂಟದ ವತಿಯಿಂದ ಸಹಕಾರ ನೀಡುವಂತೆ ಸಭೆಯಲ್ಲಿ ಒತ್ತಾಯ ಮಾಡಿದರು.

ಈ ಸಾಲಿನಲ್ಲಿ ಸಂಘವು ರೂ. ೫ ಲಕ್ಷ ಲಾಭಾಂಶ ಗಳಿಸಿರುವ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಂಘದ ಕಾರ್ಯದರ್ಶಿ ಹೆಚ್.ಎಂ. ಬಸವರಾಜ್ ತಿಳಿಸಿದರು. ಕಳೆದ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲನ್ನು ಹಾಕಿ ರೈತ ಸದಸ್ಯರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಆರ್. ಜಗದೀಶ್, ನಿರ್ದೇಶಕರುಗಳಾದ ಕೆ.ಎಸ್. ಜೋಯಪ್ಪ, ನಾಗರಾಜ್, ಬಿ.ಆರ್ ಧರ್ಮರಾಜ್, ಶಂಕರನ್, ಅನ್ನಮ್ಮಬಿಜು, ಜ್ಯೋತಿ ವಿಜಯಕುಮಾರ್, ಎಸ್. ಆರ್. ಮಹೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಎಂ. ಬಸವರಾಜ್ ಸೇರಿದಂತೆ ಸೀಗೆಹೊಸೂರು, ಭುವನಗಿರಿ, ಜೇನುಕಲ್ಲು ಬೆಟ್ಟ ಗ್ರಾಮ ವ್ಯಾಪ್ತಿಯ ನೂರಾರು ಸದಸ್ಯರು ಉಪಸ್ಥಿತರಿದ್ದರು. ಬಸವರಾಜ್ ಸ್ವಾಗತಿಸಿ, ವಂದಿಸಿದರು.