ವೀರಾಜಪೇಟೆ, ಅ. ೪ : ವೀರಾಜಪೇಟೆ ತಾಲೂಕು ಆಸ್ಪತ್ರೆಯನ್ನು ೪೦೦ ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರಕಾರ ನೀಡಿದ ಅನುಮೋದನೆಯ ಮೊದಲ ಹಂತದ ರೂ.೯೫.೬ ಕೋಟಿ ವೆಚ್ಚದಲ್ಲಿ ೨೫೦ ಹಾಸಿಗೆಗಳ ಮೇಲ್ದರ್ಜೆ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ. ಈ ಕಾಮಗಾರಿಯ ಸಂಪೂರ್ಣ ರೂಪುರೇಷೆ ಸಿದ್ಧಗೊಂಡಿದೆ. ಶಾಸಕ ಪೊನ್ನಣ್ಣ ಪ್ರಯತ್ನದಿಂದಾಗಿ ಈ ಆಸ್ಪತ್ರೆಯಲ್ಲಿ, ಜನತೆಗೆ ಬೇಕಾದ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ದೊರಕಲಿದ್ದು, ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳು ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಕಾರ್ಯಕ್ರಮವಿದೆ. ಸಂಪೂರ್ಣ ಆಸ್ಪತ್ರೆ ಕಾಮಗಾರಿ ಕ್ಷಿಪ್ರವಾಗಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ತಿಳಿಸಿದ್ದಾರೆ.