ಮಡಿಕೇರಿ, ಅ. ೭: ಮುಜರಾಯಿ ಇಲಾಖೆಗೆ ಸೇರಿದ ಭಾಗಮಂಡಲ ಹೋಬಳಿಯ ಭಾಗಮಂಡಲ, ತಣ್ಣಿಮಾನಿ, ತಾವೂರು ಮತ್ತು ಚೇರಂಗಾಲ ಗ್ರಾಮದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಕ್ಕೆ ಸೇರಿದ ಜಾಗದ ಒತ್ತುವರಿ ಕುರಿತ ಕಡತ ಇದೀಗ ಭೂ ದಾಖಲೆಗಳ ಇಲಾಖೆಯ ಸರ್ವೆಯೊಂದಿಗೆ ಜಿಲ್ಲಾಧಿಕಾರಿಗಳ ಬಳಿ ತಲುಪಿದೆ. ಈ ಕುರಿತು ಸಲ್ಲಿಕೆಯಾಗಿದ್ದ ದೂರಿನಂತೆ ಲೋಕಾಯುಕ್ತದ ನಿರ್ದೇಶನದನ್ವಯ ಈ ಸರ್ವೆ ನಡೆದಿದ್ದು, ನಕ್ಷೆ ಸಹಿತ ವರದಿಯನ್ನೊಳಗೊಂಡ ಕಡತ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಿದೆ ಎಂದು ಕೊಡಗು ಏಕೀಕರಣ ರಂಗ ಮಾಹಿತಿ ನೀಡಿದೆ. ದೇವಾಲಯಕ್ಕೆ ಸೇರಿದ ಜಾಗವನ್ನು ಕೇರಳ ಮೂಲದ ರೆಸಾರ್ಟ್ ಮಾಲೀಕರೊಬ್ಬರು ಸೇರಿದಂತೆ ೪೦ ಜನ ಸ್ಥಳೀಯ ಪ್ರಮುಖರು ಒತ್ತುವರಿ ಮಾಡಿರುವುದು ಕಂಡು ಬಂದಿದ್ದು ಜಿಲ್ಲಾಧಿಕಾರಿಗಳಿಗೆ ಮುಂದಿನ ನಡೆಯ ಬಗ್ಗೆ ಕಾದುನೋಡುವಂತಾಗಿದೆ.
ಹಿಂದಿನ ವಿಚಾರ
ಮುಜರಾಯಿ ಇಲಾಖೆಗೆ ಸೇರಿದ ಭಾಗಮಂಡಲ ಹೋಬಳಿಯ ಭಾಗಮಂಡಲ, ತಣ್ಣಿಮಾನಿ, ತಾವೂರು ಮತ್ತು ಚೇರಂಗಾಲ ಗ್ರಾಮದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಕ್ಕೆ ಸೇರಿದ ಜಾಗದ ವಿಚಾರವಾಗಿ ಮುಜರಾಯಿ ಇಲಾಖೆಯ ಆಯುಕ್ತರಾದ ಬಿ.ಎನ್ ಕೃಷ್ಣಯ್ಯ ಅವರು ದಿ: ೨೦/೦೪/೨೦೧೨ ರಂದು ದೇವಾಲಯ ಜಾಗದ ಒತ್ತುವರಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಟಾಸ್ಕ್ ಫೋರ್ಸನ್ನು ರಚಿಸಿದ್ದರು. ಅದರಂತೆ ೧೭/೦೧/೨೦೧೩ ರಲ್ಲಿ ಭಗಂಡೇಶ್ವರ-ತಲಕಾವೇರಿ ದೇವಾಲಯದ ಚಿರಾಸ್ಥಿಗಳ ಅಳತೆಕಾರ್ಯ ನಡೆದು ೭೧ ಜನರು ದೇವಾಲಯದ ಆಸ್ತಿಯನ್ನು ಕಬಳಿಕೆ ಮಾಡಿರುವುದು ಸರ್ವೆಯಿಂದ ಸಾಬೀತಾಗಿತ್ತು. ಆದರೆ ಸದರಿ ಕಡತವು ಸರ್ವೆ ಇಲಾಖೆಯಿಂದ ನಾಪತ್ತೆಯಾಗಿ ಈ ಪ್ರಕರಣವನ್ನು ಕೆಲವು ಪ್ರಭಾವಿಗಳು ಮುಚ್ಚಿಹಾಕಿದ್ದರು ಎನ್ನಲಾಗಿದೆ. ಮತ್ತು ಕೆಲವು ಆರ್.ಟಿ.ಸಿಗಳಲ್ಲಿ ಭಗಂಡೇಶ್ವರ ದೇವಾಲಯದ ಹೆಸರಿನೊಂದಿಗೆ ಖಾಸಗಿ ವ್ಯಕ್ತಿಗಳ ಹೆಸರು ಜಂಟಿಯಾಗಿತ್ತು, ತದನಂತರ ೨೦-೦೨-೨೦೧೯ ರಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ ಅವರು ಈ ವಿಚಾರವಾಗಿ ದೂರನ್ನು ಸಲ್ಲಿಸಿದ್ದರು. ಆದರೂ ಕೂಡ ಜಿಲ್ಲಾಡಳಿತ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಈ ಒತ್ತುವರಿಯ ವಿಚಾರವಾಗಿ ಕೊಡಗು ಏಕೀಕರಣರಂಗ ಮತ್ತು ಕೊಡಗು ಸೇವಾ ಕೇಂದ್ರ ಮಡಿಕೇರಿ ಇವರು ಜಿಲ್ಲಾಧಿಕಾರಿಗಳಿಗೆ ಮತ್ತೆ ದೂರು ನೀಡಿದ್ದರು. ಅದರಂತೆ ಕಾರ್ಯನಿರ್ವಹಣಾಧಿಕಾರಿಗಳು ಭಗಂಡೇಶ್ವರ-ತಲಕಾವೇರಿ ದೇವಾಲಯ ಇವರು ಸರ್ವೆ ನಡೆಸಲು ಭೂ ದಾಖಲೆಗಳ ಇಲಾಖೆಗೆ ಶುಲ್ಕ ಪಾವತಿಸಿ ಅದರಂತೆ ಭೂ ದಾಖಲೆಗಳ ಇಲಾಖೆಯು ಒತ್ತುವರಿ ಸರ್ವೆ ಕಾರ್ಯವನ್ನು ನಡೆಸಿ ಒತ್ತುವರಿಯನ್ನು ಗುರುತಿಸಿತು, ಆದರೆ ಮತ್ತೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ಕಡತ ವಿಲೇವಾರಿ ಆಗಲಿಲ್ಲ. ತದನಂತರ ಕೊಡಗು ಏಕೀಕರಣ ರಂಗವು ಕರ್ನಾಟಕ ಲೋಕಾಯುಕ್ತರಿಗೆ ದೂರನ್ನು ನೀಡಿತ್ತು. ಅದರಂತೆ ಲೋಕಾಯುಕ್ತರು ಕೊಡಗು ಜಿಲ್ಲಾಧಿಕಾರಿಗಳಿಗೆ ಒತ್ತುವರಿಗೆ ಸಂಬAಧಪಟ್ಟ ಜಾಗದ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದಂತೆ ಇದೀಗ ವರದಿ ಸಲ್ಲಿಕೆಯಾಗಿದೆ.
ಭೂ ದಾಖಲೆಗಳ ಇಲಾಖೆಯು ದೇವಾಲಯಕ್ಕೆ ಸೇರಿದ ಜಾಗದ ಒತ್ತುವರಿ ಸರ್ವೆಯನ್ನು ಮಾಡಿ ನಕ್ಷೆಯೊಂದಿಗೆ ವರದಿಯನ್ನು ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದು ಪ್ರಸ್ತುತ ಕಡತವು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿದೆ. ಇದರಲ್ಲಿ ದೇವಾಲಯದ ಜಾಗವನ್ನು ಕೇರಳ ಮೂಲದ ರೆಸಾರ್ಟ್ ಮಾಲೀಕರೊಬ್ಬರು ಒತ್ತುವರಿ ಮಾಡಿರುವುದು ಕಂಡುಬAದಿರುತ್ತದೆ ಹಾಗೂ ೪೦ ಜನ ಸ್ಥಳೀಯ ಪ್ರಮುಖರು ಒತ್ತುವರಿ ಮಾಡಿರುವುದು ಕಂಡುಬAದಿರುತ್ತದೆ ಎಂದು ಕೊಡಗು ಏಕೀಕರಣ ರಂಗದ ಪ್ರಮುಖರು ಮಾಹಿತಿ ನೀಡಿದ್ದಾರೆ.
ಏಕೀಕರಣ ರಂಗದ ಪರವಾಗಿ ಕಾರ್ಯದರ್ಶಿ ಟಿ.ಎಂ. ಸೋಮಯ್ಯ ಅವರು ದೂರು ಸಲ್ಲಿಸಿದ್ದರು.