ಮಡಿಕೇರಿ, ಅ. ೮ : ದಸರಾ ಅಂಗವಾಗಿ ತಾ. ೨ ರಂದು ರಾತ್ರಿ ಮಡಿಕೇರಿಯಲ್ಲಿ ನಡೆದ ದಶಮಂಟಪ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಸಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಹಾಗೂ ದಸರಾ ಸಂದರ್ಭ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬೇಕೆಂದು ಕೋರಿ ಕಾನೂನು ಹೋರಾಟ ಕೈಗೊಳ್ಳಲು ದಶಮಂಟಪ ಸಮಿತಿ ನಿರ್ಧಾರ ಕೈಗೊಂಡಿದೆ.

ರಾತ್ರಿ ೧೦ ಗಂಟೆ ನಂತರ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ಧ್ವನಿವರ್ಧಕವನ್ನು ಬಳಸಬಾರದೆಂಬ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಶೋಭಾಯಾತ್ರೆ ಸಂದರ್ಭ ಧ್ವನಿವರ್ಧಕವನ್ನು ಬಳಸಲಾಗಿದೆ ಎಂದು ಆರೋಪಿಸಿ ನಗರ ಠಾಣೆಯಲ್ಲಿ ೧೦ ಮಂಟಪ ಸಮಿತಿಗಳ ಒಟ್ಟು ೬೨ ಮಂದಿ ವಿರುದ್ಧ ಪ್ರತ್ಯೇಕ ೧೦ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಇಂದು ದಶಮಂಟಪ ಸಮಿತಿ ನೇತೃತ್ವದಲ್ಲಿ ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಠಾಣೆಗೆ ಹಾಜರಾಗಿ ವೃತ್ತ ನಿರೀಕ್ಷಕ ಪಿ.ಕೆ. ರಾಜು ಅವರೊಂದಿಗೆ ಸಮಾಲೋಚನೆ ನಡೆಸಿದರು.

ಪೊಲೀಸರ ಸೂಚನೆಯಂತೆ ರಾತ್ರಿ ೧೧ ಗಂಟೆಯ ನಂತರ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಿದ್ದರೂ ಪ್ರಕರಣ ದಾಖಲಿಸಲಾಗಿದೆ ಎಂದು ಸಮಿತಿಯವರು ಆಕ್ಷೇಪ ವ್ಯಕ್ತಪಡಿಸಿದರು.

ಕೋರ್ಟ್ ಆದೇಶದ ಪ್ರಕಾರ ರಾತ್ರಿ ೧೦ ಗಂಟೆಯ ನಂತರ ಯಾವುದೇ ಕಾರಣಕ್ಕೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಇದರ ಉಲ್ಲಂಘನೆ ಸ್ಪಷ್ಟವಾಗಿ ಕಂಡುಬAದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕಾಗಿದೆ ಎಂದು ವೃತ್ತ ನಿರೀಕ್ಷಕ ರಾಜು ಅವರು ಸಲಹೆ ನೀಡಿದರು.

ಬಳಿಕ ಸಮಿತಿಯ ಪದಾಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ ಸಂಬAಧ ಪೊಲೀಸರು ನೀಡಿದ ನೋಟೀಸ್ ಸ್ವೀಕರಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್, ಮಂಟಪ ಸಮಿತಿಗಳು ನಿಯಮ ಪಾಲಿಸಿವೆ. ಕಥಾಸಾರಾಂಶಕ್ಕೆ ಮಾತ್ರ ಧ್ವನಿವರ್ಧಕದ ಬಳಸಿಕೊಳ್ಳಲಾಗಿದೆ. ಆದರೂ ಪ್ರಕರಣ ದಾಖಲಿಸಿರುವುದು ಪ್ರಶ್ನಿಸಿ ಹಾಗೂ ಮುಂದಿನ ವರ್ಷದಲ್ಲಿ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ಕೈಗೊಳ್ಳಲಾಗುವುದು. ಈ ಮೂಲಕ ನ್ಯಾಯಾಲಯಕ್ಕೆ ಇಲ್ಲಿನ ವ್ಯವಸ್ಥೆ ಹಾಗೂ ಆಚರಣೆಯ ಹಿನ್ನೆಲೆ ಬಗ್ಗೆ ಗಮನಕ್ಕೆ ತಂದು ದಸರಾ ಸಂದರ್ಭ ಧ್ವನಿವರ್ಧಕ ಬಳಕೆಗೆ ವಿನಾಯಿತಿ ನೀಡುವಂತೆ ಗಮನ ಸೆಳೆಯಲಾಗುವುದು. ಇದಕ್ಕಾಗಿ ವಕೀಲರನ್ನು ಕೂಡ ಸಮಿತಿ ನೇಮಿಸಿದೆ ಎಂದು ಮಾಹಿತಿ ನೀಡಿದರು.

ಗೌರವಾಧ್ಯಕ್ಷ ಬಿ.ಎಂ. ರಾಜೇಶ್ ಮಾತನಾಡಿ, ವಿನಾಕಾರಣ ಪ್ರಕರಣ ದಾಖಲಿಸಿರುವುದಕ್ಕೆ ಆಕ್ಷೇಪವಿದೆ. ಮಂಟಪ ಸಮಿತಿಗಳು ಒಗ್ಗೂಡಿ ಪರಿಹಾರ ಕಂಡುಕೊಳ್ಳುವ ೪ಐ(ಮೊದಲ ಪುಟದಿಂದ) ಪ್ರಯತ್ನ ನಡೆಸಲಾಗುವುದು. ಈ ಬಾರಿ ಶೇ ೯೦ ನಿಯಮವನ್ನು ಬಹುತೇಕ ಮಂಟಪಗಳು ಪಾಲಿಸಿವೆ. ಆಚರಣೆಯ ಮೇಲೆ ಹೇರಿರುವ ನಿರ್ಬಂಧವನ್ನು ಪ್ರಶ್ನಿಸಿ ನ್ಯಾಯಾಂಗ ಮೊರೆ ಹೋಗಲಾಗುವುದು ಎಂದರು.

ಈ ಸಂದರ್ಭ ನಗರ ಠಾಣಾಧಿಕಾರಿ ಅನ್ನಪೂರ್ಣ, ಸಂಚಾರ ವಿಭಾಗದ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ವಿವಿಧ ಮಂಟಪ ಸಮಿತಿ ಸದಸ್ಯರು ಹಾಜರಿದ್ದರು.