ಮಡಿಕೇರಿ, ಅ. ೯: ನಸುಕಿನ ವೇಳೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೭ ವರ್ಷದ ಬಾಲಕ ಸಜೀವ ದಹನಗೊಂಡ ಹೃದಯವಿದ್ರಾವಕ ಘಟನೆ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟಕೇರಿ ಬಳಿಯ ಹೆರವನಾಡು ಗ್ರಾಮದ ಹರ್‌ಮಂದಿರ ಶಾಲೆಯ ವಸತಿ ನಿಲಯದಲ್ಲಿ ಸಂಭವಿಸಿದೆ.
ಕುಂದಚೇರಿ ಗ್ರಾಮದ ಚೆಟ್ಟಿಮಾನಿ ನಿವಾಸಿ ಕೇಕಡಮನೆ ಅನಿಲ್ ಕುಮಾರ್ ಹಾಗೂ ತ್ರಿವೇಣಿ ದಂಪತಿ ಪುತ್ರ ೨ನೇ ತರಗತಿ ವಿದ್ಯಾರ್ಥಿ ಪುಷ್ಪಕ್ (೭) ಸಾವಿಗೀಡಾಗಿದ್ದು, ವಸತಿನಿಲಯದಲ್ಲಿ ಮಲಗಿದ್ದ ಉಳಿದ ೫೨ ವಿದ್ಯಾರ್ಥಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆÀರವನಾಡು ಗ್ರಾಮದಲ್ಲಿರುವ ಹರ್‌ಮಂದಿರ ಶಾಲೆ ದೆಹಲಿ ಮೂಲದ ಸರಕಾರೇತರ ಸಂಸ್ಥೆ ಇಂಡಸ್ ಕ್ವಾಲಿಟಿ ಫೌಂಡೇಷನ್ ಟ್ರಸ್ಟ್ನ ಮೂಲಕ ೨೦೧೯ರಿಂದ ನಡೆಯುತ್ತಿದೆ. ಎಲ್‌ಕೆಜಿಯಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ವ್ಯವಸ್ಥೆಯೊಂದಿಗೆ ಇಲ್ಲಿ ಉಚಿತ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ಶಾಲೆಯಲ್ಲಿ ಒಟ್ಟು ೧೦೨ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಈ ಪೈಕಿ ೭೨ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ವಾಸಿಸುತ್ತಿದ್ದರು. ದಸರಾ ರಜೆ ಮುಗಿಸಿ ೫೩ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಮರಳಿದ್ದರು.
ಗಾಢನಿದ್ರೆಯಲ್ಲಿದ್ದ ಮಕ್ಕಳು
ಇಂದು ಬೆಳಿಗ್ಗೆ ಸುಮಾರು ೪ ಗಂಟೆ ವೇಳೆಗೆ ವಸತಿ ನಿಲಯದಲ್ಲಿ ದಟ್ಟಹೊಗೆ ಆವರಿಸಿ ಉಸಿರಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ೬ನೇ ತರಗತಿಯ ವಿದ್ಯಾರ್ಥಿ, ಕಾಲೂರು ಗ್ರಾಮದ ಬಬಿನ್ ಬಿದ್ದಪ್ಪ ಎಚ್ಚರಗೊಂಡು ಕೋಣೆಯ ಕಿಟಕಿ ಹಾಗೂ ಬಾಗಿಲು ತೆರೆದಿದ್ದಾನೆ.
ಬೆಂಕಿಯ ಜ್ವಾಲೆ ಕಂಡು ಗಾಬರಿಗೊಂಡ ಬಬಿನ್ ಗಾಢನಿದ್ರೆಯಲ್ಲಿದ್ದ ಉಳಿದ ವಿದ್ಯಾರ್ಥಿಗಳನ್ನು ಎಬ್ಬಿಸಿದ್ದಾನೆ. ಜೊತೆಗಿದ್ದ ವಾರ್ಡನ್ ಸುಮಿತ್ರ ಕೂಡ ಎಚ್ಚರಗೊಂಡು ವಿದ್ಯಾರ್ಥಿಗಳೊಂದಿಗೆ ಕಟ್ಟಡದಿಂದ ಹೊರಬರುವ ಪ್ರಯತ್ನ ನಡೆಸಿದ್ದಾರೆ. ಆದರೆ, ದಟ್ಟ ಹೊಗೆ, ಬೆಂಕಿಯಿAದ ಕೆಲಕಾಲ ಕಟ್ಟಡದೊಳಗೆ ಸಿಲುಕಿ ಹೊರಬರಲಾಗದ ಸ್ಥಿತಿ ಸೃಷ್ಟಿಯಾಗಿ ಅತಂತ್ರರಾಗಿದ್ದಾರೆ. ಈ ವೇಳೆ ಕಿಟಕಿಯೊಂದರ ಮೂಲಕ ವಿದ್ಯಾರ್ಥಿಯೋರ್ವ ದಾಟಿ ಬಂದಿದ್ದಾನೆ. ನಂತರ ಮತ್ತೊಂದು ಕಟ್ಟಡದಲ್ಲಿದ್ದ ಸಿಬ್ಬಂದಿ ಬಂದು ಬಾಗಿಲು ಒಡೆದು ತೆರೆದಿದ್ದಾರೆ. ಈ ಮೂಲಕ ಎಲ್ಲರೂ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಹೊರಬಂದ ವಿದ್ಯಾರ್ಥಿಗಳನ್ನು ಲೆಕ್ಕ ಹಾಕಿದ ಸಂದರ್ಭ ಓರ್ವ ವಿದ್ಯಾರ್ಥಿ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಆ ವೇಳೆ ಪುಷ್ಪಕ್ ವಸತಿ ನಿಲಯದ ಒಳಗೆ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ. ಬೆಂಕಿ ಜ್ವಾಲೆ ಹಾಗೂ ಆವರಿಸಿಕೊಂಡಿದ್ದ ಹೊಗೆಯಿಂದ ಪುಷ್ಪಕ್ ಸುಳಿವು ಕೂಡ ಅಲ್ಲಿದ್ದವರಿಗೆ ಆ ಕ್ಷಣದಲ್ಲಿ ಕಂಡುಬರಲಿಲ್ಲ. ಘಟನೆ ಸಂದರ್ಭ ಪುಷ್ಪಕ್ ಎಚ್ಚರಗೊಂಡಿದ್ದಾನೆ. ಆದರೆ, ಹೊಗೆಯಿಂದ ಅಸ್ವಸ್ಥಗೊಂಡು ಕುಸಿದು ಬಿದ್ದು, ಅಗ್ನಿದುರಂತದಲ್ಲಿ ಸಜೀವ ದಹನವಾಗಿದ್ದಾನೆ ಎಂದು ಜೊತೆಗಿದ್ದ ವಿದ್ಯಾರ್ಥಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.
ಈ ಬಗ್ಗೆ ಸಿಬ್ಬಂದಿ ವರ್ಗ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಮಡಿಕೇರಿಯಿಂದ ತೆರಳಿದ ತಂಡ ಜಲಫಿರಂಗಿ ಪ್ರಯೋಗಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಈ ವೇಳೆ ಪುಷ್ಪಕ್ ಮೃತದೇಹ ಸಜೀವ ದಹನವಾಗಿ ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಯಿಂದ ಇಬ್ಬರು ವಿದ್ಯಾರ್ಥಿಗಳು ಹಾಗೂ ವಾರ್ಡನ್ ಸುಮಿತ್ರ ಅಸ್ವಸ್ಥಗೊಂಡಿದ್ದು, ಅವರನ್ನು ತಕ್ಷಣ (ಮೊದಲ ಪುಟದಿಂದ) ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಇದೀಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಪಾರಾದ ವಿದ್ಯಾರ್ಥಿಗಳನ್ನು ಸಮೀಪದ ಕಟ್ಟಡವೊಂದಕ್ಕೆ ಸ್ಥಳಾಂತರಿಸಲಾಯಿತು. ವಿಷಯ ತಿಳಿದು ಮಕ್ಕಳ ಪೋಷಕರು ಆಗಮಿಸಿ ತಮ್ಮ ಮಕ್ಕಳನ್ನು ಕರೆದೊಯ್ದರು. ಸ್ಥಳಕ್ಕಾಗಮಿಸಿದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಟ್ಟಡ ಅಗ್ನಿಗಾಹುತಿ
ಶಾಲೆಯ ವಸತಿ ನಿಲಯ ಕಟ್ಟಡ ಅವಘಡದಿಂದ ಅಗ್ನಿಗಾಹುತಿಯಾಗಿದೆ. ಧರಾಶಾಹಿಯಾಗಿರುವ ಗೋಡೆ, ಹೆಂಚು ಹಾಗೂ ಅಳವಡಿಸಿದ್ದ ಸೀಲಿಂಗ್, ಸುಟ್ಟುಕರಕಲಾಗಿರುವ ಮರಮುಟ್ಟುಗಳು ದುರಂತದ ಭೀಕರತೆಯನ್ನು ಅನಾವರಣ ಮಾಡಿದವು.
ಕಟ್ಟಡದ ೪ ಕೊಠಡಿಯಲ್ಲಿ ವಿದ್ಯಾರ್ಥಿಗಳು ತಂಗಲು ವ್ಯವಸ್ಥೆ ಮಾಡಲಾಗಿತ್ತು. ಪುಷ್ಪಕ್ ಇದ್ದ ಕೋಣೆಯಲ್ಲಿ ೧೦ ವಿದ್ಯಾರ್ಥಿಗಳು ಮಲಗಿದ್ದರು. ಇಲ್ಲಿಯೇ ವಾರ್ಡನ್ ಕೂಡ ಇದ್ದರು ಎಂದು ತಿಳಿದು ಬಂದಿದೆ.
ಅಧಿಕಾರಿಗಳ ದೌಡು
ಘಟನೆ ತಿಳಿಯುತ್ತಿದ್ದಂತೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ತಹಶೀಲ್ದಾರ್ ಶ್ರೀಧರ್, ಡಿಡಿಪಿಐ ಬಸವರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪುಷ್ಪಕ್ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಶಾರ್ಟ್ ಸರ್ಕ್ಯೂಟ್ ಶಂಕೆ
ದುರ್ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ರಾತ್ರಿ ವೇಳೆಯಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಅನಂತರ ಹೈವೋಲ್ಟೇಜ್‌ನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿರಬಹುದು ಎಂದು ಅಂದಾಜು ಮಾಡಲಾಗಿದೆ. ಘಟನೆಗೆ ನಿಖರ ಕಾರಣ ತಿಳಿಯುವ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಿಬ್ಬಂದಿ ವರ್ಗ, ಸುತ್ತಮುತ್ತ ನಿವಾಸಿಗಳಲ್ಲಿಯೂ ಘಟನೆ ಕಣ್ಣೀರು ತರಿಸಿತು.
ತಂದೆ ಅನಿಲ್, ತಾಯಿ ತ್ರಿವೇಣಿ, ಅಕ್ಕ ಸಿಂಚನ ಪುಪ್ಪಕ್‌ನನ್ನು ನೆನೆಯುತ್ತ ಗೋಳಾಡುತ್ತಿದ್ದರು. ‘ಮಗನ ಮುಖ ನೋಡಲಾಗದ ಸ್ಥಿತಿ ಬಂತಲ್ಲ’ ಎಂದು ರೋದಿಸುತ್ತಿದ್ದಾರೆ.
ಮಗಳನ್ನು ಶಾಲೆಗೆ ದಾಖಲಿಸಲು ಬಂದ ಸಂದರ್ಭ ಪುಷ್ಪಕ್ ಕೂಡ ಇಲ್ಲಿಯೇ ಶಾಲೆಗೆ ಸೇರುತ್ತೇನೆ ಎಂದು ಹಠ ಹಿಡಿದ. ಹಾಗಾಗಿ ಇಲ್ಲಿಗೆ ಸೇರಿಸಿದ್ದೆವು. ಇದೀಗ ಮಗನನ್ನು ಕಳೆದುಕೊಂಡಿದ್ದೇವೆ ಎಂದು ತಾಯಿ ತ್ರಿವೇಣಿ ನೆನೆದರು.
ಘಟನಾ ಸ್ಥಳದಲ್ಲಿ ಕ್ರಮ ನೆರವೇರಿಸಿದ ತಾಯಿ: ಇದೇ ವೇಳೆ ಮೃತಪಟ್ಟ ಸ್ಥಳದಿಂದ ಮಗನನ್ನು ಕರೆಯುವ ಕ್ರಮವನ್ನು ತಾಯಿ ತ್ರಿವೇಣಿ ನೆರವೇರಿಸಿದರು. ಕೋಲು ಹಿಡಿದುಕೊಂಡು ತೆರಳಿ ‘ಮಗನೇ ಮನೆಗೆ ಬಾ’ ಎಂದು ಹೇಳಿ ದೇಹವನ್ನು ಮನೆಗೆ ಕೊಂಡೊಯ್ದು ಅಲ್ಲಿ ಅಂತಿಮ ವಿಧಿವಿಧಾನ ನಡೆಸಿದರು.
ಸುಟ್ಟು ಕರಕಲಾದ ದೇಹ - ಮಾದರಿ ಸಂಗ್ರಹ
ಘಟನೆಯಿAದ ಪುಷ್ಪಕ್ ದೇಹ ಸುಟ್ಟುಕರಕಲಾಗಿ ಕುರುಹು ಸಿಗದಂತಹ ಸ್ಥಿತಿಯಲ್ಲಿತ್ತು. ನಿರಂತರ ಕಾರ್ಯಾಚರಣೆ ಕೈಗೊಂಡು ಬೆಂಕಿನAದಿಸಿದ ನಂತರ ಪೊಲೀಸರು ಕಟ್ಟಡ ಪ್ರವೇಶಿಸಿ ಹುಡುಕಾಟ ನಡೆಸಿದಾಗ ದೇಹ ಸಂಪೂರ್ಣ ಸುಟ್ಟು ಕರಕಲಾಗಿರುವುದು ಗೋಚರಿಸಿದೆ.
ಅನಂತರ ಪೊಲೀಸರು ಮಹಜರು ನಡೆಸಿ ದೇಹದ ಕೆಲ ಮಾದರಿ ಹಾಗೂ ಮೂಳೆಯನ್ನು ವೈದ್ಯರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು. ಸುಟ್ಟುಕರಕಲಾದ ದೇಹದ ಭಾಗವನ್ನು ಬಟ್ಟೆಯಲ್ಲಿ ಸುತ್ತಿ ಕುಟುಂಬಕ್ಕೆ ಪೊಲೀಸರು ಹಸ್ತಾಂತರಿಸಿದರು.
ರಜೆ ಮುಗಿಸಿ ಬಂದಿದ್ದ
ದಸರಾ ರಜೆ ಮುಗಿಸಿ ಭಾನುವಾರ ಸಂಜೆ ಪೋಷಕರೊಂದಿಗೆ ಶಾಲೆಗೆ ಬಂದ ಪುಷ್ಪಕ್ ವಸತಿ ನಿಲಯದಲ್ಲಿ ತಂಗಲು ಆರಂಭಿಸಿದ್ದ. ಶಾಲೆ ಆರಂಭ ಎಂಬ ಸಂದೇಶ ಮೊಬೈಲ್‌ಗೆ ಬಂದAತೆ ಶಾಲೆಗೆ ಹೋಗಲು ತುದಿಗಾಲಿನಲ್ಲಿ ನಿಲ್ಲುತ್ತಿದ್ದ. ಶಾಲಾ ವಾತಾವರಣಕ್ಕೆ ಹೊಂದಿಕೊAಡಿದ್ದ ಎಂದು ತಾಯಿ ತ್ರಿವೇಣಿ ನೆನೆದರು. ಪುಷ್ಪಕ್ ಅತ್ಯಂತ ಕ್ರಿಯಾಶೀಲನಾಗಿದ್ದ. ಎಲ್ಲರೊಂದಿಗೆ ಬೆರೆಯುತ್ತ. ಶಿಕ್ಷಣದೊಂದಿಗೆ ಕ್ರೀಡೆಯಲ್ಲಿಯೂ ಅತ್ಯಂತ ಆಸಕ್ತಿ ಹೊಂದಿದ್ದ ಎಂದು ಸಹಪಾಠಿ ಹಾಗೂ ಪುಷ್ಪಕ್ ಊರಿನವರು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಪುಷ್ಪಕ್ ಅಕ್ಕ
ಪುಷ್ಪಕ್ ಸಹೋದರಿ ೬ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಸಿಂಚನ ಕೂಡ ಇದೇ ವಸತಿ ನಿಲಯದಲ್ಲಿ ವಾಸಿಸುತ್ತ ಇಲ್ಲಿಯೇ ಕಲಿಕೆಯಲ್ಲಿ ತೊಡಗಿಕೊಂಡಿದ್ದಳು. ಅನಂತರ ಪುಷ್ಪಕ್ ಕೂಡ ಇಲ್ಲಿಯೇ ಶಾಲೆಗೆ ದಾಖಲಾಗಿದ್ದ.
ತಮ್ಮ ಪುಷ್ಪಕ್ ಕಟ್ಟಡದೊಳಗೆ ಸಿಲುಕಿಕೊಂಡಿರುವುದು ಆಕೆಗೆ ತಿಳಿದು ಬರುತ್ತಿದಂತೆ ದಿಗ್ಭçಮೆಗೆ ಒಳಗಾಗಿದ್ದಾಳೆ. ತಮ್ಮನಿಗಾಗಿ ಬಿಕ್ಕಿಬಿಕ್ಕಿ ಅಳುತ್ತ ತಮ್ಮನನ್ನು ಕಾಪಾಡುವಂತೆ ಸಿಬ್ಬಂದಿಗಳೊಡನೆ ಅಳಲು ತೋಡಿಕೊಂಡಿದ್ದಾಳೆ.
ತನಿಖೆ ನಡೆಸಲಾಗುವುದು - ಡಿಸಿ
ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು. ಘಟನಾ ಸ್ಥಳಕ್ಕಾಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ತನಿಖೆ ನಡೆಸಿ ಸತ್ಯಾಂಶ ಹೊರತರಲಾಗುವುದು ಎಂದರು.
ಶಾಲೆ ಹಾಗೂ ವಸತಿ ನಿಲಯಕ್ಕೆ ಅನುಮತಿ ತೆಗೆದುಕೊಂಡ ಬಗ್ಗೆಯೂ ತನಿಖೆಯಾಗಲಿದೆ. ಕಟ್ಟಡದ ಸಾಮರ್ಥ್ಯ, ರಕ್ಷಣಾ ಕ್ರಮಗಳ ಕುರಿತು ಕೂಡ ಪರಿಶೀಲಿಸಲಾಗುವುದು. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಸರಕಾರದ ಗಮನಕ್ಕೆ ತರಲಾಗುವುದು. ಕುಟುಂಬದೊAದಿಗೆ ಜಿಲ್ಲಾಡಳಿತ ಸದಾ ಇರುತ್ತದೆ. ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.