ಸೋಮವಾರಪೇಟೆ, ಅ. ೧೦: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆದ ಘಟನೆಯನ್ನು ಖಂಡಿಸಿ, ಆರೋಪಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ದೆಹಲಿಯಿಂದ ಗಡೀಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಒಕ್ಕೂಟದ ಸದಸ್ಯರುಗಳು, ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ನ್ಯಾಯವಾದಿ ರಾಕೇಶ್ ಕಿಶೋರ್ ಎಂಬಾತ ನ್ಯಾಯಪೀಠದ ಮೇಲೆ ಶೂ ಎಸೆಯಲು ಮುಂದಾದ ನಡುವಳಿಗೆ ಸಂವಿಧಾನ ವಿರೋಧಿಯಾಗಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಜಯಪ್ಪ ಹಾನಗಲ್ ಹೇಳಿದರು.
ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮವಾಗಬೇಕು. ಇದರೊಂದಿಗೆ ಮತ್ತೊಬ್ಬ ವಕೀಲರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೊಳಕು ಮನುಷ್ಯ ಎಂದು ಅವಮಾನಿಸಿರುವ ಬಗ್ಗೆಯೂ ವರದಿಯಾಗಿದ್ದು, ಇವರ ಮೇಲೂ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವ ತನಕ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.
ನಂತರ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಒಕ್ಕೂಟದ ಉಪಾಧ್ಯಕ್ಷ ಕೆ.ಬಿ. ರಾಜು, ಕಾರ್ಯದರ್ಶಿ ಬಿ.ಇ.ಜಯೇಂದ್ರ, ಸಹ ಕಾರ್ಯದರ್ಶಿ ಮಹೇಶ್, ಖಜಾಂಚಿ ಎಚ್.ಎ. ನಾಗರಾಜು, ಪದಾಧಿಕಾರಿಗಳಾದ ಜೆ.ಆರ್. ಪಾಲಾಕ್ಷ, ಸುರೇಶ್, ಈರಪ್ಪ, ವಿವಿಧ ಪ್ರಗತಿಪರ ಸಂಘಟನೆ, ದಲಿತಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.