ವೀರಾಜಪೇಟೆ, ಅ. ೯ : ಪತ್ನಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಪತಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮೂಲತಃ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬ ತಾಲೂಕು ನಿವಾಸಿ ಸಿದ್ದಾಪುರ ಹೊಳೆಕೆರೆ ಪೈಸಾರಿಯಲ್ಲಿ ನೆಲೆಸಿದ್ದ ಸುರೇಶ್ (೫೦) ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಕಳೆದ ೨೦೧೦ರಲ್ಲಿ ಪತ್ನಿ ಶಶಿಕಲಳನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಸುರೇಶ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಸುರೇಶ್ ೨೦೨೪ರಲ್ಲಿ ಪೊಲೀಸ್ ಸೆರೆಗೆ ಸಿಕ್ಕಿದ್ದ ಆತನನ್ನು ಬಂದಿಸಿದ ಪೊಲೀಸರು ನ್ಯಾಯಾಂಗ ವಶಕೊಪ್ಪಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್. ನಟರಾಜ್ ಅವರು ತೀರ್ಪು ಪ್ರಕಟಿಸಿದ್ದು, ಆರೋಪಿ ಸುರೇಶ್‌ಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ೫೦ ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ ೬ ತಿಂಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರ ಅಭಿಯೋಜಕರಾದ ಯಾಸಿನ್ ಅಹಮ್ಮದ್ ವಾದ ಮಂಡಿಸಿದರು.
- ಕಿಶೋರ್ ಶೆಟ್ಟಿ