ಮಡಿಕೇರಿ, ಅ. ೧೦: ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯ ಹೆರವನಾಡು ಗ್ರಾಮದ ಹರ್‌ಮಂದಿರ ಶಾಲೆಯ ವಸತಿ ನಿಲಯದಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂಬAಧ ಸೂಕ್ತ ತನಿಖೆಯಾಗಬೇಕೆಂದು ಜಿಲ್ಲಾ ಬಿಜೆಪಿ ವಕ್ತಾರ ತಳೂರು ಕಿಶೋರ್ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆ ಹಾಗೂ ವಸತಿ ನಿಲಯಗಳನ್ನು ಪ್ರಾರಂಭಿಸಲು ಸಂಬAಧಪಟ್ಟ ಇಲಾಖೆ, ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಜೊತೆಗೆ ಅಗತ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸುವುದರೊಂದಿಗೆ ಲೆಕ್ಕಪರಿಶೋಧನೆ ನಡೆಯಬೇಕು. ಅಳವಡಿಸಿಕೊಂಡಿರುವ ನಿಯಮಗಳ ಕುರಿತು ವರ್ಷಂಪ್ರತಿ ಬಹಿರಂಗಗೊಳಿಸಬೇಕು. ಹರ್‌ಮಂದಿರ ಶಾಲೆಯ ಅನುಮತಿ ಹಾಗೂ ಕೈಗೊಂಡ ಸುರಕ್ಷಾ ಕ್ರಮಗಳು ಸಮರ್ಪಕವಾಗಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಇದಕ್ಕೆ ಅನುಮತಿ ನೀಡಿರುವ ಅಧಿಕಾರಿಗಳು ಹೊಣೆಗಾರರು ಆಗುತ್ತಾರೆ. ಈ ನಿಟ್ಟಿನಲ್ಲಿ ದುರಂತಕ್ಕೆ ಕಾರಣ ಹಾಗೂ ಅನುಮತಿಯ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.

ಹರ್‌ಮಂದಿರ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿದ್ದಲ್ಲಿ ಅರುಣ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿರುವ ಎಷ್ಟು ವಿದ್ಯಾಸಂಸ್ಥೆಗಳ ಜಾಗಗಳು ಭೂಪರಿವರ್ತನೆ ಆಗಿದೆ ಎಂಬುದರ ಮಾಹಿತಿ ಕೇಳಿ ಹಲವು ಸಮಯ ಕಳೆದರೂ ಯಾವುದೇ ಮಾಹಿತಿಯನ್ನು ಇಲಾಖೆ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ರಾಜ್ಯ ಸರಕಾರ ೧೦ ಕೆಜಿ ಬದಲು ೫ ಕೆಜಿ ಅಕ್ಕಿ ನೀಡಲು ಮುಂದಾಗಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದ್ದು, ಕೇಂದ್ರ ಸರಕಾರದಿಂದ ನೀಡುವ ಅಕ್ಕಿಯನ್ನು ಮಾತ್ರ ರಾಜ್ಯ ಸರಕಾರ ಒದಗಿಸಲು ಮುಂದಾಗಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಗೆ ಶಾಲಾ ರಜೆ ಅವಧಿ ವಿಸ್ತರಣೆ ಮಾಡಿರುವುದು ಸರಿಯಲ್ಲ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ನಿರುದ್ಯೋಗಿ ಯುವಕ-ಯುವತಿಯನ್ನು ಬಳಸಿಕೊಂಡು ಸಮೀಕ್ಷೆ ಕೈಗೊಳ್ಳಬಹುದಿತ್ತು. ಶಿಕ್ಷಕರನ್ನು ಸರಕಾರ ಬಲಿಪಶು ಮಾಡುತ್ತಿದೆ ಎಂದು ಕಿಡಿಕಾರಿದರು.

ಕೊಡಗಿನ ಅತಿವೃಷ್ಟಿಯಿಂದ ಕಾಫಿ ಫಸಲು ಹಾನಿಗೀಡಾಗಿದ್ದರೂ ರಾಜ್ಯ ಸರಕಾರ ಪರಿಹಾರ ಬಿಡುಗಡೆ ಮಾಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ತಲಕಾವೇರಿ - ಭಾಗಮಂಡಲಕ್ಕೆ ತೆರಳುವ ರಸ್ತೆ ಮಾರ್ಗಗಳು ತೀರಾ ಹದಗೆಟ್ಟಿದ್ದು, ಸರಿಪಡಿಸುವಲ್ಲಿ ನಿರ್ಲಕ್ಷö್ಯ ತಾಳಲಾಗಿದೆ. ನಾಮಕಾವಸ್ಥೆಗೆ ಮಣ್ಣು ಹಾಕಿ ಮುಚ್ಚಲಾಗಿದೆ ಎಂದು ಕಿಶೋರ್ ಆರೋಪಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನು ಮಂಜುನಾಥ್, ಪ್ರಮುಖರಾದ ಎಂ.ಪಿ. ಬಾಲಕೃಷ್ಣ, ದೊರೆ ಮಾದಪ್ಪ ಕೂಪದಿರ, ಎಂ.ಜೆ. ಅನುದೀಪ್ ಹಾಜರಿದ್ದರು.