ವೀರಾಜಪೇಟೆ, ಅ. ೧೧: ವೀರಾಜಪೇಟೆ ನಗರದ ಕೆಲವು ಭಾಗಗಳಲ್ಲಿ ಸಾರ್ವಜನಿಕರು ಕಸ ತಂದು ಸುರಿಯುತ್ತಿದ್ದು, ಸ್ಥಳೀಯರು ಹಾಗೂ ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸುವುದನ್ನು ತಡೆಯಲು ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ನೇತೃತ್ವದಲ್ಲಿ ಪುರಸಭೆ ವತಿಯಿಂದ ಕಸ ಹಾಕುವ ಸ್ಥಳಗಳಲ್ಲಿ ಹೂವಿನ ಗಿಡಗಳು ಹಾಗೂ ರಂಗೋಲಿಯನ್ನು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ನಗರದ ಮಾಂಸ ಮಾರುಕಟ್ಟೆಯ ಆಟೋ ನಿಲ್ದಾಣದ ಬಳಿ ಹಲವು ವರ್ಷಗಳಿಂದ ಕಸದ ಸಮಸ್ಯೆ ಅತೀ ದೊಡ್ಡ ಸಮಸ್ಯೆಯಾಗಿ ಪುರಸಭೆಯನ್ನು ಕಾಡುತ್ತಿತ್ತು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರಲ್ಲಿ ಕಸವನ್ನು ರಸ್ತೆ ಬದಿಗಳಲ್ಲಿ ಹಾಕದಂತೆ ಜಾಗೃತಿ ಮೂಡಿಸಿದರು.

ಕೆಲವರು ಅದೇ ಸ್ಥಳಕ್ಕೆ ತಂದು ಕಸವನ್ನು ಹಾಕಿ ಹೋಗುತ್ತಿದ್ದರು, ನಮ್ಮ ನಗರ ಸುಂದರ ನಗರ ಮಾಡುವ ಉದ್ದೇಶದಲ್ಲಿ ಪುರಸಭೆ ಅಧ್ಯಕ್ಷರ ಮೊದಲ ಪ್ರಯತ್ನ ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಪುರಸಭೆಯ ಕಸ ಮುಕ್ತ ಪರಿಸರ ಕಾಳಜಿಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸಂದರ್ಭ ಮಾತನಾಡಿದ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗಳು ಕಸ ಹಾಕುತ್ತಿದ್ದು ಇದನ್ನು ನಿಯಂತ್ರಿಸುವ ಉದ್ದೇಶದಿಂದ ಪುರಸಭೆ ವತಿಯಿಂದ ಕೆಲವು ಭಾಗಗಳಲ್ಲಿ ರಂಗೋಲಿಯನ್ನು ಹಾಕಿ ಹೂವಿನ ಗಿಡಗಳ ಕುಂಡಗಳನ್ನು ಇಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಪುರಸಭೆ ಸದಸ್ಯ ಎಸ್.ಹೆಚ್. ಮತೀನ್, ಪುರಸಭೆಯ ಪರಿಸರ ಅಭಿಯಂತರಾದ ರೀತು ಸಿಂಗ್, ಆರೋಗ್ಯ ಅಧಿಕಾರಿ ಕೋಮಲ ಸೇರಿದಂತೆ ಪುರಸಭೆಯ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.