ದಿನಾಂಕ ೨೯/೦೯/೨೦೨೫ ರಂದು ಸಂಜೆ ೭ ಗಂಟೆಯ ವೇಳೆಗೆ ಒಂದು ದೂರವಾಣಿ ಕರೆಯೊಂದು ಬಂದಿತು. ನೋಡಿದರೆ ಅದು ಶಕ್ತಿ ಪತ್ರಿಕೆಯ ಸಂಪಾದಕರಾದ ಚಿದ್ವಿಲಾಸ್ ಅವರ ಕರೆ. ಅವರು ತಿಳಿಸಿದ ವಿಚಾರ ಇಷ್ಟು. ನಾಳೆ ನಿಮ್ಮ ಲೇಖನಮಾಲೆಯ ಇನ್ನೂರನೆಯ ಕಂತು ಪ್ರಸಾರವಾಗುತ್ತಿದೆ. ಹಾಗಾಗಿ ನಮ್ಮ ಪತ್ರಿಕೆಯ ಆಯುಧ ಪೂಜೆಯ ದಿನ ನೀವು ಬಂದು ನಮ್ಮ ಮನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಆಗ್ರಹಪೂರ್ವಕವಾಗಿ ಹೇಳಿದರು. ಅಂತೆಯೇ ನಾನು ಅಕ್ಟೋಬರ್ ೧ನೆಯ ದಿನಾಂಕ ಬುಧವಾರ ಬೆಳಿಗ್ಗೆ ೯ಕ್ಕೆ ಶಕ್ತಿ ಪತ್ರಿಕೆಯ ಕಾರ್ಯಾಲಯಕ್ಕೆ ತಲುಪಲು ಮಡಿಕೇರಿಗೆ ಹೊರಟೆನು. ಮಡಿಕೇರಿಯ ಮಂಜಿನ ವಾತಾವರಣ ಮುತ್ತಿನ ಮಳೆಹನಿಯನ್ನು ಸಿಂಪಡಿಸುತಿತ್ತು. ತಂಪಾದ ವಾತಾವರಣದಲ್ಲಿ ಹಿಂದಿನ ದಿನದವರೆಗೂ ಇದ್ದ ಜ್ವರಕ್ಕೆ ಮತ್ತೆ ಚಳಿಯ ಬೆಸುಗೆ ಬಿತ್ತು.

ಆದರೆ ೯:೨೦ ಕ್ಕೆ ಕಾರ್ಯಾಲಯ ತಲುಪಿದಾಗ ಅಲ್ಲೆಲ್ಲಿಯೂ ಕೃತಕವೆನಿಸದ ಸ್ವಾಭಾವಿಕ ಸ್ವಾಗತ ದೊರಕಿತು. ಪರಿಚಯ ಇದ್ದವರು ಮುಗುಳ್ನಗೆ ಬೀರಿ ಮಾತನಾಡಿಸಿದರು. ಮತ್ತೊಬ್ಬರು ಬಂದು ಕಚೇರಿಯ ಒಳಗೆ ಕರೆದೊಯ್ದರು. ಪೂಜಾ ಕೈಂಕರ್ಯದಲ್ಲಿ ತೊಡಗಿದ್ದ ಪ್ರಧಾನ ಸಂಪಾದಕರಾದ ರಾಜೇಂದ್ರ ಸರ್ ಅಲ್ಲಿಂದಲೇ ಕುಶಲೋಪರಿ ವಿಚಾರಿಸಿದರು. ಅಷ್ಟರಲ್ಲಿ ಸಂಪಾದಕರಾದ ಚಿದ್ವಿಲಾಸ್ ಸರ್ ತಮ್ಮ ಕೊಠಡಿಯಿಂದ ಹೊರಗೆ ಬಂದು ಆತ್ಮೀಯವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದುದಕ್ಕೆ ಧನ್ಯವಾದಗಳನ್ನು ಹೇಳಿದರು. ಸರಿಯಾಗಿ ೯:೨೫ಕ್ಕೆ ಪೂಜಾ ಕಾರ್ಯಕ್ರಮ ಪ್ರಾರಂಭವಾಯಿತು. ದೇವರ ಪೂಜೆಯ ಗಂಟೆಯ ಸದ್ದಿಗೆ ಎಲ್ಲರೂ ಬಂದು ನೆರೆದರು. ಪೂಜೆಯು ಮುಗಿದು ಮಂಗಳಾರತಿ ಪ್ರಸಾದ ವಿತರಣೆಯ ಬಳಿಕ ನನ್ನನ್ನು ಆತ್ಮೀಯವಾಗಿ ಕರೆದು ಸೇರಿದ್ದ ಎಲ್ಲ ಶಕ್ತಿ ಬಳಗದ ಎದುರು ಕೂರಿಸಿ ನನ್ನ ಕುರಿತು ಸ್ವತಃ ಚಿದ್ವಿಲಾಸ್‌ರವರೇ ಎಲ್ಲರಿಗೂ ಪರಿಚಯಿಸಿ ಅವರ ತಾಯಿ ಮತ್ತು ಹಿರಿಯಣ್ಣನ ಜೊತೆಗೂಡಿ ಸನ್ಮಾನಿಸಿದರು. ಒಂದೆರಡು ಮಾತನಾಡಲು ಹೇಳಿದರು. ಮಾತುಗಳು ಬಾಯಿಯಿಂದ ಹೊರಡದೇ ಮುಗ್ಗರಿಸುತ್ತಿದ್ದವು. ಹೇಳಬೇಕಾದುದನ್ನು ಹೇಳದೆಯೇ ಕೃತಜ್ಞತೆಯನ್ನು ಹೇಳಿ ನಿಲ್ಲಿಸಿದೆ. ಮುಂದೆ ಬಳಗದ ಎಲ್ಲರೂ ಸೇರಿ ಸಹಭೋಜನ ಎಂಬAತೆ ಬೆಳಗಿನ ತಿಂಡಿ ಕಾಫಿ ಮುಗಿಸಿ ಎಲ್ಲರೊಡನೆ ಆತ್ಮೀಯವಾಗಿ ಬೆರೆತು ವಿದಾಯ ತಿಳಿಸಿ ವಾಪಸ್ಸು ಮನೆಗೆ ಬಂದೆ.

ಇಷ್ಟೆಲ್ಲ ಆದರೂ ಏನೋ ಒಂದು ಕೊರತೆಯಾಗಿದೆ ಎಂದು ನನ್ನೊಳಗೆ ನನಗನಿಸುತಿತ್ತು. ಆದರೆ ಯಾರೊಡನೆಯೂ ಹೇಳಿಕೊಳ್ಳುವಂತಿರಲಿಲ್ಲ. ಸಂಜೆಯ ವೇಳೆಗೆ “ಶಕ್ತಿ” ಸಲಹಾ ಸಂಪಾದಕರಾದ ಅನಂತಶಯನರ ಧ್ವನಿ ಸಂದೇಶ ಎಲ್ಲವನ್ನೂ ಬಿಚ್ಚಿಟ್ಟಿತು. ಅವರ ಧ್ವನಿ ಕೇಳಿದಾಗ ಅರ್ಥವಾಗಿದ್ದು ಇಷ್ಟು. ತುರ್ತು ಕೆಲಸದ ನಿಮಿತ್ತ ಸಲಹಾ ಸಂಪಾದಕರು ಶಿವಮೊಗ್ಗಕ್ಕೆ ಹೋಗಿದ್ದ ವಿಚಾರ ತಿಳಿದು ಬಂತು. ಅಲ್ಲಿಗೆ ನನ್ನೊಳಗೆ ಕಾಡುತ್ತಿದ್ದ ಕೊರತೆಯ ನಿವಾರಣೆಯಾಯಿತು.

ಅಂದು ೨೦೧೭ನೆಯ ಇಸವಿ. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ದಿನ. ಅದೇ ದಿನ ನನ್ನ ವ್ಯಕ್ತಿ ಪರಿಚಯವನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ಅನಂತಶಯನರವರು ವ್ಯವಸ್ಥೆ ಮಾಡಿದ್ದರು. ಅಂದು ನನಗಾದ ಸಂತೋಷ ಅಷ್ಟಿಷ್ಟಲ್ಲ. ಕಾಲಕ್ರಮದಲ್ಲಿ ನನಗೆ ದೊರೆತ ಆ ಸಂತೋಷವು ಪ್ರತಿಯೊಬ್ಬ ಲೇಖಕರಿಗೆ ದೊರೆಯಲಿ ಎನ್ನುವ ದೃಷ್ಟಿಯಿಂದ “ಕೊಡಗಿನ ಕವಿ ಸಾಹಿತಿಗಳ ಪರಿಚಯ ಮಾಲಿಕೆ” ಆರಂಭಕ್ಕೆ ನಾಂದಿಯಾಯಿತು. ಒಂದು ಕಾಲದಲ್ಲಿ ಕೊಡಗಿನಲ್ಲಿ ಸಾಹಿತಿಗಳ ಕೊರತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ ಇಂದು ಕೊಡಗಿನ ಕವಿ ಸಾಹಿತಿಗಳ ಪರಿಚಯ ಮಾಲಿಕೆಯ ಇನ್ನೂರನೆಯ ಕಂತು ಮುಗಿಸಿ ಮುಂದೆ ಸಾಗುತ್ತಿದೆ. ಅಷ್ಟೇ ಅಲ್ಲ ಪುಸ್ತಕ ಪ್ರಕಟಿಸುತ್ತಿರುವ ಕವಿಗಳು ಸಹ ಹೆಚ್ಚುತ್ತಿದ್ದಾರೆ. ನಮ್ಮ ಲೇಖನದ ನಿಯಮಗಳು ಕನಿಷ್ಟ ಒಂದಾದರೂ ಕೃತಿಯನ್ನು ರಚಿಸಿರಲೇಬೇಕು. ಮತ್ತು ಕೊಡಗಿಗೆ ನೇರವಾಗಿ ಸಂಬAಧಿಸಿದವರಾಗಿರಬೇಕು. ಅಂದರೆ ಕೊಡಗಿನಲ್ಲಿ ಹುಟ್ಟಿ ಬೆಳೆದವರು ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರೂ ಸರಿ ಅಥವಾ ಪ್ರಪಂಚದ ಯಾವುದೇ ಮೂಲೆಯವರಾದರೂ ಸರಿ ಯಾವುದೇ ನಿಮಿತ್ತವಾಗಿಯಾದರೂ ಸರಿ ಕೊಡಗಿನಲ್ಲಿ ನೆಲೆಸಿದವರಾಗಿರಬೇಕು. ಕವಿ ಸಾಹಿತಿಗಳ ಪರಿಚಯ ಮಾಲಿಕೆಯಿಂದ ನನಗೆ ಸಾಕಷ್ಟು ಕವಿಗಳ ಪ್ರೀತಿ ವಿಶ್ವಾಸ ದೊರಕಿದೆ ಅಷ್ಟೇ ಅಲ್ಲ ವೈಲೇಶ ಪಿ.ಎಸ್.ಕೊಡಗು ಎಂಬ ಹೆಸರು ಕೊಡಗಿನ ಶಕ್ತಿ ಪತ್ರಿಕೆಯ ಸಾಕಷ್ಟು ಓದುಗರಲ್ಲಿ ಮನೆ ಮಾಡಿದೆ. ಇದಕ್ಕೆಲ್ಲದಕ್ಕೂ ಕಾರಣವಾದ ಶಕ್ತಿ ಪತ್ರಿಕೆಗೆ ಮತ್ತು ಆಡಳಿತ ವರ್ಗ ಹಾಗೂ ಶಕ್ತಿ ಬಳಗಕ್ಕೆ ಧನ್ಯವಾದಗಳನ್ನು ಹೇಳಬಯಸುತ್ತೇನೆ.