ಕುಶಾಲನಗರ, ಅ. ೧೨: ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಮ್ಮನಕೊಲ್ಲಿ ಯಿಂದ ಹಾರಂಗಿ ಮಾರ್ಗದಲ್ಲಿ ಅಪರಾಧ ಪ್ರಕರಣಗಳು, ಸಂಚಾರ ಸುವ್ಯವಸ್ಥೆ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ದೇವಾಲಯ ಸಮಿತಿಯೊಂದು ಹೊಸ ಚಿಂತನೆಯೊAದಿಗೆ ಕಾರ್ಯೋನ್ಮುಖವಾಗಿದೆ.

ಕುಶಾಲನಗರ ಗುಮ್ಮನಕೊಲ್ಲಿಯಲ್ಲಿರುವ ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಈ ಭಾಗದಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸುವ ಮೂಲಕ ಕಣ್ಗಾವಲು ಏರ್ಪಡಿಸಿದೆ.

ದೇವಾಲಯ ಬಳಿಯಿಂದ ಹಾರಂಗಿ ಜಲಾಶಯ ಕಡೆಗೆ ತೆರಳುವ ಮಾರ್ಗದಲ್ಲಿ ಅಗ್ನಿಶಾಮಕ ಠಾಣೆಯವರೆಗೆ ಅಲ್ಲಲ್ಲಿ ಸಿ.ಸಿ. ಕ್ಯಾಮರಗಳನ್ನು ಅಳವಡಿಸಿದೆ. ಅಗತ್ಯವಿರುವ ವಿದ್ಯುತ್ ಸಂಪರ್ಕವನ್ನು ಸೋಲಾರ್ ಪ್ಯಾನಲ್ ಮೂಲಕ ಪಡೆಯಲಾಗುತ್ತ್ತಿದೆ.

ಕಣ್ಗಾವಲು: ವಿಶಾಲವಾದ ರಸ್ತೆ, ಮರಗಿಡಗಳಿಂದ ತುಂಬಿರುವ ಜನದಟ್ಟಣೆಯೂ ಕಡಿಮೆಯಿರುವ ಈ ಮಾರ್ಗ ಸ್ಥಳೀಯ ವಾಯು ವಿಹಾರಿಗಳ ನೆಚ್ಚಿನ ಪ್ರದೇಶ. ಆದರೆ ರಸ್ತೆ ಬದಿ ಕಸ ತ್ಯಾಜ್ಯ ಎಸೆಯುವವರು ಇಲ್ಲಿನ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದರು.

ನಿಯಂತ್ರಣಕ್ಕೆ ಬಾರದ ಕಸದ ಸಮಸ್ಯೆ ಒಂದೆಡೆಯಾದರೆ ಸರಗಳ್ಳತನ, ವೀಲಿಂಗ್ ನಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಸಮಿತಿ ವತಿಯಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ದೇವಾಲಯ ಸಮಿತಿಯ ಅಧ್ಯಕ್ಷರು ಹಾಗೂ ಕಾಫಿ ಉದ್ಯಮಿ ಸುದೀಪ್.

೮ ಕಡೆ ೨೦ ಕ್ಯಾಮರ: ಒಟ್ಟು ೨ ಕಿ.ಮೀ. ದೂರದವರೆಗೆ ೮ ಸ್ಥಳಗಳಲ್ಲಿ ೨೦ ಕ್ಯಾಮರಗಳನ್ನು ಈಗಾಗಲೇ ಅಳವಡಿಸಲಾಗಿದೆ. ಸೋಲಾರ್ ಬ್ಯಾಟರಿ ಚಾಲಿತ ಕ್ಯಾಮರಗಳು ಹಗಲು - ರಾತ್ರಿ ಕಾರ್ಯನಿರ್ವಹಣೆ ಮಾಡುವ ಮೂಲಕ ಕಣ್ಗಾವಲು ನಡೆಯುತ್ತಿದೆ.

ಕ್ಯಾಮರಗಳಲ್ಲಿ ಸೆರೆಯಾಗುವ ದೃಶ್ಯಗಳು ಕುಶಾಲನಗರ ಟೌನ್ ಪೊಲೀಸ್ ಠಾಣೆ, ಪುರಸಭೆ ಕಚೇರಿ ಸೇರಿದಂತೆ ಸಮಿತಿಯವರ ಸಂಪರ್ಕಕ್ಕೆ ದೊರೆತು ಅಗತ್ಯವಿದ್ದಾಗ ಪರಿಶೀಲನೆ ನಡೆಯುತ್ತಿದೆ.

ದಂಡ: ಈ ಭಾಗದಲ್ಲಿ ಮತ್ತೆ ಕಸ ಹರಡುವುದು ಕಂಡುಬAದಲ್ಲಿ ಅಂತಹವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮಕೈಗೊಂಡು ರೂ. ೫,೦೦೦ ಮೊತ್ತದ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಈ ಸಂಬAಧ ಅಲ್ಲಲ್ಲಿ ಬಿತ್ತಿ ಪತ್ರಗಳನ್ನು ಅಳವಡಿಸಲಾಗಿದೆ. ಇದುವರೆಗೆ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿದ್ದು ಕಸ ಹಾಕಿದ ವ್ಯಕ್ತಿಗಳು ಮತ್ತು ವಾಹನ ಪತ್ತೆಹಚ್ಚಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಯೋಜನೆಯ ಉಸ್ತುವಾರಿ ಹೊತ್ತಿರುವ ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಉದ್ಯಮಿಯಾಗಿರುವ ಸುದೀಪ್ ತಿಳಿಸಿದ್ದಾರೆ. ಕೆಲವು ವಾಹನ, ಜಾನುವಾರುಗಳ ಕಳುವು ಪ್ರಕರಣಗಳು ಕೂಡ ಈ ವ್ಯವಸ್ಥೆಯಿಂದ ಪತ್ತೆ ಆಗಿರುವುದು ವಿಶೇಷ.

ಈ ವ್ಯವಸ್ಥೆಯ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಕೂಡ ಗಮನಹರಿಸಿದ್ದು ಸ್ಥಳೀಯ ಸಂಸ್ಥೆಗಳ ಪ್ರಮುಖರ ಕಾರ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ಕುಶಾಲನಗರ ಪಟ್ಟಣ ಮತ್ತು ನೆರೆ ಗ್ರಾಮಗಳ ಹೆದ್ದಾರಿ, ಗ್ರಾಮಾಂತರ ರಸ್ತೆಗಳ ಆಯಕಟ್ಟಿನ ಪ್ರದೇಶಗಳಲ್ಲಿ ದಾsನಿಗಳ ಸಹಕಾರದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮರಗಳನ್ನು ಅಳವಡಿಸುವ ಮೂಲಕ ಇಂತಹ ಪ್ರಕರಣಗಳಿಗೆ ಶಾಶ್ವತ ಕಡಿವಾಣ ಹಾಕಲು ಯೋಜನೆ ರೂಪಿಸಲಾಗಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಗುಡ್ಡೆಹೊಸೂರು, ಕುಶಾಲನಗರ ಕೈಗಾರಿಕಾ ಬಡಾವಣೆ, ಸುಂಟಿಕೊಪ್ಪ ಹೆದ್ದಾರಿಯಲ್ಲಿ ಕ್ಯಾಮರಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

- ಚಂದ್ರಮೋಹನ್