ವೀರಾಜಪೇಟೆ, ಅ. ೨೦ : ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಬಾಳುಗೋಡುವಿನಲ್ಲಿ ನವೆಂಬರ್ ೬ ರಿಂದ ೯ ರವರೆಗೆ ಅಂತರ ಕೊಡವ ಸಮಾಜಗಳ ನಡುವೆ ೧೨ನೇ ಕೊಡವ ನಮ್ಮೆಯನ್ನು ಆಚರಿಸಲಾಗುವುದು. ಈ ನಮ್ಮೆಯು ಕೊಡವ ಜನಾಂಗಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.
ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವ ಜನಾಂಗದ ಆಚಾರ, ವಿಚಾರ, ಪÀದ್ಧತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷ ಈ ಕೊಡವ ನಮ್ಮೆಯನ್ನು ಆಚರಿಸಲಾಗುತ್ತಿದೆ. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಮಾತ್ರ ಪ್ರವೇಶ ಶುಲ್ಕವನ್ನು ನಿಗದಿಪಡಿಸಿದ್ದು, ಉಳಿದ ಯಾವುದೇ ಪೈಪೋಟಿಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಒಂದು ಕೊಡವ ಸಮಾಜದಿಂದ ಒಂದು ತಂಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ನಮ್ಮೆಯಲ್ಲಿ ಅಪರಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ವಿಶೇಷÀವಾಗಿ ಮಹಿಳೆಯರಿಗೆ ಫೈವ್‌ಸೈರ‍್ಸ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ನವೆಂಬರ್ ೬ ರಂದು ಬೆಳಿಗ್ಗೆ ೧೦ ಗಂಟೆಗೆ ಅಂತರ ಕೊಡವ ಸಮಾಜಗಳ ನಡುವೆ ನಡೆಯುವ ನಾಕೌಟ್ ಹಾಕಿ ಪಂದ್ಯಾಟಕ್ಕೆ ಚಾಲನೆ ನೀಡಲಾಗುವುದು. ಅದೇ ದಿನ ೯.೩೦ ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ನವೆಂಬರ್ ೮ ರಂದು ೯ ಗಂಟೆಗೆ ಹಾಕಿ ಪಂದ್ಯಾಟದ ಸೆಮಿಫೈನಲ್ಸ್ ನಡೆಯಲಿದೆ. ಮತ್ತೊಂದು ಮೈದಾನದಲ್ಲಿ ಮಹಿಳೆಯರು ಮತ್ತು ಪುರುಷರ ಹಗ್ಗಜಗ್ಗಾಟ ಪಂದ್ಯಗಳು ನಡೆಯಲಿವೆ. ೧೧ ಗಂಟೆಗೆ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಗುವುದು.
ನವೆಂಬರ್ ೯ ರಂದು ಪೂರ್ವಾಹ್ನ ೯ ಗಂಟೆಗೆ ಮಂದ್‌ಮರಿಯುವೊ, ೯.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಅಪರಾಹ್ನ ೨ ಗಂಟೆಗೆ ಹಾಕಿ ಪಂದ್ಯಾಟದ ಫೈನಲ್ಸ್÷ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಸ್ಫರ್ಧೆಗಳ ವಿಜೇತರಿಗೆ ರೋಲಿಂಗ್ ಟ್ರೋಫಿಯನ್ನು ವಿತರಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಕ್ರೀಡಾ ಸಮಿತಿ ಸಂಚಾಲಕ ಕಂಬೀರAಡ ಕಿಟ್ಟು ಕಾಳಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ಬೊಳ್ಳಿಯಂಗಡ ದಾದು ಪೂವಯ್ಯ, ಅಮ್ಮಣಿಚಂಡ ಸುಬ್ರಮಣಿ, ಕುಪ್ಪಂಡ ರಾಜೀವ್ ಕಾರ್ಯಪ್ಪ, ಕೂತಂಡ ಸುರೇಶ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.