ಕಣಿವೆ, ಅ. ೨೦ : ಕೊಡಗು ಜಿಲ್ಲೆಯ ಹೆಬ್ಬಾಗಿಲು ಕುಶಾಲನಗರ ಪಟ್ಟಣವೂ ಸೇರಿದಂತೆ, ಪಟ್ಟಣದ ಸೆರಗಿನಲ್ಲಿರುವ ಮುಳ್ಳುಸೋಗೆ, ಜನತಾ ಕಾಲನಿ, ಗುಮ್ಮನಕೊಲ್ಲಿ ಗ್ರಾಮಗಳ ಭಕ್ತರ ಪಾಲಿನ ಅಧಿದೇವತೆ ಕೋಣಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ ತಾ. ೨೨ ರಿಂದ ೨೪ ರವರೆಗೆ ಶ್ರದ್ಧಾಭಕ್ತಿಯಿಂದ ನೆರವೇರಲಿದೆ.
ಈ ಹಿನ್ನೆಲೆಯಲ್ಲಿ ದೇವಾಲಯದ ಅಭಿವೃದ್ಧಿ ಸಮಿತಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಕುಶಾಲನಗರ ಪಟ್ಟಣದ ಹಾರಂಗಿ ರಸ್ತೆಯಲ್ಲಿರುವ ಈ ಕೋಣಮಾರಮ್ಮ ದೇವಿಯ ಸನ್ನಿಧಿ ಕಳೆದ ಕೆಲವು ವರ್ಷಗಳಿಂದ ಅಭಿವೃದ್ಧಿ ಹೊಂದುತ್ತಿದ್ದು ಅಪಾರ ಭಕ್ತರ ಇಷ್ಟಾರ್ಥ ಸಿದ್ದಿಯ ನಂಬಿಕೆಯ ಕ್ಷೇತ್ರವಾಗಿದೆ.
ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ಪೂಜೋತ್ಸವದಲ್ಲಿ ಸಹಸ್ರಾರು ಭಕ್ತರು ದೇವಾಲಯದ ಸನ್ನಿಧಿಗೆ ಬಂದು ದೇವರ ದರ್ಶನಗೈದು ಪುನೀತರಾಗುತ್ತಾರೆ. ಅಷ್ಟು ಮಾತ್ರವಲ್ಲದೆ ತಮ್ಮ ಇಷ್ಟಾರ್ಥ ಸಿದ್ದಿಯ ಪುಣ್ಯ ಕ್ಷೇತ್ರವಾಗಿಯೂ ಮಾರ್ಪಟ್ಟಿದೆ.
ದೇವಾಲಯದ ಐತಿಹ್ಯ
ಸರಿ ಸುಮಾರು ಎರಡು ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಈ ಕೋಣಮಾರಮ್ಮ ಸನ್ನಿಧಿ ಹಿಂದೆ ಬನದ ದೇವತೆಯಾಗಿತ್ತು. ಅಂದರೆ ಕುಶಾಲನಗರ ಇಷ್ಟೊಂದು ಬೆಳವಣಿಗೆ ಹೊಂದಿರದ ಕಾಲವದು. ಅತ್ತ ಮುಳ್ಳುಸೋಗೆ ಗ್ರಾಮವೂ ಕೂಡ ಕೆಲವೇ ಕೆಲವು ಮನೆಗಳನ್ನು ಹೊಂದಿದ್ದ ಪುಟ್ಟ ಗ್ರಾಮವಾಗಿತ್ತು. ಅಂದು ಇಂದಿನ ಹಾಗೆ ಕೋಣಮಾರಮ್ಮ ದೇವಾಲಯ ರಸ್ತೆ ಅಭಿವೃದ್ಧಿ ಹೊಂದಿರದ ಕಾಲ. ಅಂದು ಕೇವಲ ಕಾಲು ಹಾದಿ ಮಾತ್ರವಿತ್ತು.
ಹಿಂದೆ ಪಟೇಲರು ಹಾಗೂ ಶ್ಯಾನುಭೋಗರ ಆಡಳಿತವಿದ್ದ ಕಾಲವದು. ಇಬರಿಬ್ಬರೇ ಆಯಾಯ ಗ್ರಾಮಗಳ ಆಗು ಹೋಗುಗಳನ್ನು ನಿಶ್ಚಯಿಸುವ, ನಿರ್ಧರಿಸುವ ಅಥವಾ ಧಿಕ್ಕರಿಸುವ ಹೈಕಮಾಂಡ್.
ಅAದು ಮುಳ್ಳುಸೋಗೆ ಗ್ರಾಮದಲ್ಲಿ ಪಟೇಲ್ ಕಪಿನಿ ಗೌಡ ಅವರ ಆಡಳಿತ. ಅಂದು ಅವರೇ ಊರಿನ ಶ್ರೀಮಂತರು. ಅವರ ಬಳಿ ಇಲ್ಲದವರು ಬಂದು ಕೃಷಿ - ಒಕ್ಕಣೆ ಮಾಡುತ್ತಿದ್ದರು.
ಮುಳ್ಳುಸೋಗೆಯ ಈಗಿನ ಓಂಕಾರ ಬಡಾವಣೆ ಇರುವ ಸ್ಥಳದಲ್ಲಿ ಅಂದರೆ ಸೋಮೇಶ್ವರ ದೇವರ ಕೆರೆ ಇರುವ ದಡದಲ್ಲಿ ಕಪಿನಿಗೌಡರ ಕೃಷಿ ಒಕ್ಕಣೆ ಮಾಡುವ ಕಣವಿತ್ತು.
ಕಣದಲ್ಲಿ ಹೇರಳವಾದ ರಾಗಿಯ ಫಸಲಿತ್ತು. ಈ ರಾಗಿಯನ್ನು ತೂರಲು ಒಂದ್ರಿ ಅಥವಾ ಮರದ ಅವಶ್ಯವಿತ್ತು.
ಕಪಿನಿಗೌಡರ ಕಣದಲ್ಲಿ ಒಕ್ಕಣೆ ಮಾಡುತ್ತಿದ್ದ ಕೂಲಿಯವ ರಾಗಿ ಒಂದ್ರಿ ಮಾಡುವ ಮರವನ್ನು ಕೇಳಿಕೊಳ್ಳಲೆಂದು ತನ್ನ ಯಜಮಾನ ಕಪಿನಿಗೌಡರ ಮುಳ್ಳುಸೋಗೆಯ ಮನೆಗೆ ಹೋಗಿದ್ದಾಗ ಮರವನ್ನು ಕೂಲಿಯವನ ಕೈಗೆ ಕೊಡುವಾಗ ಆತನ ಕೈ ಕಪಿನಿಗೌಡರ ಏಕೈಕ ಪುತ್ರಿಯ ಕೈಗಳಿಗೆ ತಾಗಿದವಂತೆ.
ಏಕೆAದರೆ ಈಕೆ ಮಹಾಶರಣೆ, ಸತ್ಯವತಿ. ಸದಾ ಕಾಲ ದೇವತಾ ಕಾರ್ಯಗಳಲ್ಲಿ, ಇಷ್ಟ ದೇವರ ಸ್ಮರಣೆಯಲ್ಲಿ ಇದ್ದವಳು. ಈಕೆಯ ಕೈ ಆ ಕೂಲಿಯವನ ಕೈಗೆ ತಾಗಿದ ಮಾತ್ರಕ್ಕೆ ಆಕೆ ತವರು ಮನೆಯನ್ನು ತೊರೆಯುವ ಅಗತ್ಯವಿರಲಿಲ್ಲ. ಆದರೆ ದೈವಾನುಗ್ರಹ ನಡೆದದ್ದೇ ಬೇರೆ.
ಕೂಲಿಯವನ ಕೈಗಳು ತನಗೆ ತಾಗಿದ ಕಾರಣಕ್ಕೆ ಮನನೊಂದ ಗೌಡನ ಮಗಳು ಕಣದಲ್ಲಿದ್ದ ತನ್ನ ತಂದೆ ಕಪಿನಿಗೌಡರ ಬಳಿ ಬಂದು ನನಗೆ ನಿನ್ನ ಕೂಲಿಯವನಿಂದ ಅಪಚಾರವಾಗಿದೆ.
ನಾನು ಮನೆಯಲ್ಲಿ ಇರಲು ಒಲ್ಲೆ ಎಂದುಕೊAಡು ಮನೆಯಿಂದ ತನ್ನ ತಂದೆ ಇದ್ದ ಕಣದತ್ತ ಬಂದು ಎಲ್ಲವನ್ನು ಒಪ್ಪಿಸಿ ಪಶ್ಚಿಮ ದಿಕ್ಕಿನ ಕಡೆ ಮುಖ ಮಾಡಿ ಸೋಮೇಶ್ವರ ದೇವರ ಕೆರೆಯ ದಡದ ಕಣದಿಂದ ಹೊರಟಳಂತೆ.
ಈಕೆ ಹೀಗೆ ಹೊರಡುತ್ತಿದ್ದಾಗ ಹಾಲಿ ಇರುವ ಕೋಣಮಾರಮ್ಮ ದೈವತಾ ಸನ್ನಿಧಿಯಲ್ಲಿ ಇರುವ ವೃಕ್ಷದೇವತೆ ಮರವೊಂದು ಎರಡು ಹೋಳುಗಳಾಗಿ ಈ ಗೌಡನ ಮಗಳನ್ನು ತಡೆದು ತನ್ನೊಳಗೆ ಸೇರಿಸಿಕೊಂಡು ಹಾಗೆಯೇ ನಿಂತಿತು ಎಂಬುದು ಪ್ರತೀತಿ.
ಇದು ಕೇವಲ ಮರವಲ್ಲ - ಅಮ್ಮನ ಸನ್ನಿಧಿ :
ಕುಶಾಲನಗರದ ಹಾರಂಗಿ ರಸ್ತೆಯಲ್ಲಿ ಇರುವ ಕೋಣಮಾರಮ್ಮ ದೇವತಾ ಸನ್ನಿಧಿಯಲ್ಲಿನ ಬೃಹದಾಕಾರದ ವೃಕ್ಷ ಇದು ಕೇವಲ ಮರವಲ್ಲ. ತನ್ನ ಉದರದೊಳಗೆ ದೇವತೆಯನ್ನು ಹೊಂದಿರುವ ದೇವತಾ ವೃಕ್ಷ.
ಹಾಗಾಗಿ ಅನಾದಿ ಕಾಲದಿಂದಲೂ ಈ ಸನ್ನಿಧಿಯಲ್ಲಿ ವೃಕ್ಷದ ಬುಡಕ್ಕೆ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿದೆ.
ಕೋಣದ ರುಂಡವಾಗಿ ಮಾರ್ಪಟ್ಟ ಮನುಷ್ಯನ ದೇಹ :
ಅನಾದಿ ಕಾಲದಿಂದಲೂ ಭಕ್ತರ ಪಾಲಿನ ಆರಾಧ್ಯ ದೈವ ಸನ್ನಿಧಿಯಾಗಿರುವ ಈ ಕೋಣಮಾರಮ್ಮ ದೇವತಾ ವಾರ್ಷಿಕ ಪೂಜೆ ಸಂದರ್ಭದಲ್ಲಿ ಎರಡು ನೂರು ವರ್ಷಗಳ ಹಿಂದೆ ಮನುಷ್ಯರನ್ನು ಬಲಿ ಪಡೆಯಲಾಗುತ್ತಿತ್ತು ಎನ್ನುವ ಐತಿಹ್ಯವಿದೆ.
ಅಂದು ಕೊಡಗಿನಲ್ಲಿ ಕಮೀಷನರ್ ಆಡಳಿತವಿತ್ತು. ಮನುಷ್ಯನನ್ನು ಬಲಿ ಕೊಟ್ಟ ಊರಿನ ಪಟೇಲರ ವಿರುದ್ದ ಕಮೀಷನರ್‌ಗೆ ದೂರು ನೀಡಲಾಗಿ, ಸ್ಥಳಕ್ಕೆ ಬಂದ ಕಮೀಷನರ್ ನೆರೆದಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ಮನುಷ್ಯನ ಬಲಿಕೊಟ್ಟ ಪಟೇಲರನ್ನು ಬಂಧಿಸಲು ಧಾವಿಸಿದ್ದರಂತೆ.
ಆ ಸಂದರ್ಭ ಯಾವುದೋ ಅಶರೀರವಾಣಿ ನುಡಿದು, ಎಲೈ ಮಾನವ, ಸ್ವಲ್ಪ ಹೊತ್ತು ಇರು - ಕಾಯಿ ಎಂದು ಹೇಳಿತಂತೆ.
ದೈವವಾಣಿ ಎಂದು ನಂಬಿದ ಕಮೀಷನರ್ ಕಕ್ಕಾಬಿಕ್ಕಿಯಾಗಿ ದೇವತಾ ಸನ್ನಿಧಿಯತ್ತ ದೃಷ್ಟಿ ಬೀರುತ್ತಿದ್ದಾಗ ದೇವರಿಗೆ ನೈವೇದ್ಯ ರೂಪದಲ್ಲಿ ನೀಡಲಾಗಿದ್ದ ಮನುಷ್ಯನ ರುಂಡ ಹಾಗೂ ಮುಂಡ ಕೆಲವೇ ಕ್ಷಣಾರ್ಧದಲ್ಲಿ ಕೋಣದ ರುಂಡ ಹಾಗೂ ಮುಂಡವಾಗಿ ಮಾರ್ಪಟ್ಟಿತ್ತಂತೆ. ಇದನ್ನು ಕಂಡು ಆಶ್ಚರ್ಯಚಕಿತರಾದ ಕಮೀಷನರ್ ಅಮ್ಮನ ಪವಾಡಕ್ಕೆ ಶರಣಾಗಿ ಹೋಗಿದ್ದರಂತೆ. ಅಂದಿನಿAದ ಈ ಸನ್ನಿಧಿ ಕೋಣಮಾರಮ್ಮ ಸನ್ನಿಧಿ ಎಂದು ಹೆಸರಾಯಿತಂತೆ.
ಅAದರೆ, ತನಗೆ ಮನುಷ್ಯನ ದೇಹವನ್ನು ಎಡೆಯಾಗಿ ನೀಡಿದ ತನ್ನ ತಂದೆ ಪಟೇಲನನ್ನು ಕಮೀಷನರ್ ಬಂಧಿಸುವುದನ್ನು ತಡೆಯಲು ಕೋಣಮಾರಮ್ಮ ಈ ರೀತಿ ಪವಾಡವನ್ನೇ ಸೃಷ್ಟಿಸಿದ ಬಗ್ಗೆ ಮುಳ್ಳುಸೋಗೆ ಗ್ರಾಮಕ್ಕೆ ಗ್ರಾಮವೇ ಅಂದು ವಿಸ್ಮಯ ಗೊಂಡದ್ದನ್ನು ತನ್ನ ಹಿರಿಯರಿಂದ ಕೇಳಿದ್ದಾಗಿ ಪಟೇಲ್ ಕಪಿನಿಗೌಡರ ಕುಟುಂಬಸ್ಥರಾದ ವಯೋವೃದ್ದ ಎಂ.ಕೆ.ರಾಜು "ಶಕ್ತಿ" ಯೊಂದಿಗೆ ವಿವರಿಸುತ್ತಲೇ ಅವರ ಕಣ್ಣುಗಳು ಸಾಕ್ಷಾತ್ ಕೋಣಮಾರಮ್ಮ ದೇವತೆಯ ನೆನೆದು ನೀರಾಗಿದ್ದವು.
ಭಕ್ತರಿಂದ ರಾಗಿ ಹಿಟ್ಟು ದವಸ ಸಂಗ್ರಹ :
ಪ್ರತಿ ವರ್ಷವೂ ಆಚರಿಸುತ್ತಿದ್ದ ಅಮ್ಮನ ಪೂಜೋತ್ಸವದಲ್ಲಿ ಭಾಗಿಯಾಗುವ ಭಕ್ತರಿಗೆ ಎಡೆ ಪ್ರಸಾದ ನೀಡಲು ಅಮ್ಮನಿಗೆ ನೀಡುವ ಎಡೆಯ ಮಾಂಸಾಹಾರ ದೊಂದಿಗೆ ರಾಗಿ ಮುದ್ದೆ ಊಟ ಹಾಕಲು ಗ್ರಾಮದ ಭಕ್ತರಿಂದ ಅವಶ್ಯವಿದ್ದ ದವಸಗಳನ್ನು ಸಂಗ್ರಹಿಸುತ್ತಿದ್ದ ಬಗ್ಗೆ ರಾಜು ಮಾಹಿತಿ ನೀಡಿದರು.
ಧನರಾಜು ಮನೆಯಲ್ಲಿ ಅಮ್ಮನ ಒಡವೆ ವಸ್ತ್ರಗಳ ಪೂಜೆ :
ಪಟೇಲ್ ಕಬಿನಿಗೌಡರ ಕುಟುಂಬಸ್ಥರಾದ ಓಂಕಾರ ಬಡಾವಣೆಯ ನಿವಾಸಿ ಮಡಿಕೇರಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಎಂ.ಕೆ.ಧನರಾಜು ಅವರ ಮನೆಯಲ್ಲಿ ಕೋಣಮಾರಮ್ಮ ದೇವತಾ ಮೂರ್ತಿ, ಹಾಗೂ ಇದಕ್ಕೆ ಹಾಕುವ ಚಿನ್ನಾಭರಣ, ಒಡವೆ ಹಾಗೂ ವÀÀಸ್ತçಗಳನ್ನು ಇಡಲಾಗುತ್ತಿದೆ.
ಹಾಗೆಯೇ ತಾ.೨೨ ರಂದು ಪ್ರಾತಃಕಾಲ ೪ ರಿಂದ ೫-೫೮ ಗಂಟೆಯ ತುಲಾ ಲಗ್ನದಲ್ಲಿ ಅಮ್ಮನಿಗೆ ತೊಡಿಸುವ ಪರಿಕರಗಳನ್ನು ಕಾವೇರಿ ನದಿಗೆ ಕೊಂಡೊಯ್ದು ಅಲ್ಲಿ ಗಂಗಾ ಪೂಜೆ ನೆರವೇರಿಸಿ ಪೂರ್ಣಕುಂಭ ಕಳಶಗಳೊಂದಿಗೆ ಮೆರವಣಿಗೆಯಲ್ಲಿ ಮುಳ್ಳುಸೋಗೆ ಹಾಗೂ ಜನತಾಕಾಲನಿ ರಸ್ತೆಯಲ್ಲಿ ಸನ್ನಿಧಿಗೆ ತರಲಾಗುತ್ತದೆ.
ಬಳಿಕ ವಿವಿಧ ಧಾರ್ಮಿಕ ಪೂಜೆಗಳೊಂದಿಗೆ ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ಇರುತ್ತದೆ. ತಾ.೨೩ ರಂದು ಸಂಜೆ ಮಕ್ಕಳಿಂದ ದೇವತಾ ಸನ್ನಿಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಬಳಿಕ ತಾ.೨೪ ರಂದು ಮಕರ ಲಗ್ನದಲ್ಲಿ ಅಮ್ಮನಿಗೆ ಮಹಾಪೂಜೆ, ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ನೆರೆದ ಸದ್ಭಕ್ತರಿಗೆ ಅನ್ನಸಂತರ್ಪಣೆ ಇರುತ್ತದೆ.
ಬಳಿಕ ಅದೇ ದಿನ ಸಂಜೆ ಆರು ಗಂಟೆಯಿAದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಅಮ್ಮನ ವಿಗ್ರಹವಿಟ್ಟು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಪೂಜೋತ್ಸವದ ಮೊದಲ ದಿನ ಶುದ್ಧ ಸಸ್ಯಾಹಾರಿ ಸಿಹಿ ಊಟ ಇರುತ್ತದೆ. ಕೊನೆಯ ದಿನ ಸಸ್ಯಾಹಾರದ ಊಟದೊಂದಿಗೆ ಮಾಂಸಹಾರದ ಊಟವೂ ಇರುತ್ತದೆ.
ಕಳೆದ ಹಲವು ವರ್ಷಗಳಿಂದ ಅಮ್ಮನ ಪೂಜೋತ್ಸವವು ಆನೇಕ ಭಕ್ತರ ಸಹಕಾರದಿಂದ ಶ್ರದ್ದೆಯಿಂದ ನಡೆಯುತ್ತಿದೆ. ಜೊತೆಗೆ ದೇವಾಲಯದ ಅಭಿವೃದ್ದಿಗೂ ಶ್ರಮಿಸಲಾಗಿದೆ ಎಂದು ಸಮಿತಿಯ ಗೌರವ ಅಧ್ಯಕ್ಷ ಎಂ.ಕೆ.ಧನರಾಜು, ಅಧ್ಯಕ್ಷ ಚೆಲುವರಾಜು, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಸತೀಶ್ ಕುಮಾರ್ ಹೇಳುತ್ತಾರೆ.
ಒಟ್ಟಿನಲ್ಲಿ ಪ್ರತಿ ವರ್ಷದ ದೀಪಾವಳಿ ಸಂದರ್ಭ ಕುಶಾಲನಗರದಲ್ಲಿ ನಡೆಯುವ ಕೋಣಮಾರಮ್ಮ ದೇವಿಯ ಪೂಜೋತ್ಸವ ವರ್ಷದಿಂದ ವರ್ಷಕ್ಕೆ ಮಹಾ ಉತ್ಸವವಾಗಿ ಅನೇಕ ಭಕ್ತರನ್ನು ಆಕರ್ಷಿಸುತ್ತಿದೆ. ಅಷ್ಟು ಮಾತ್ರವಲ್ಲ, ಭಕ್ತರ ಕೋರಿಕೆಗಳ ಇಷ್ಟಾರ್ಥಸಿದ್ಧಿಯ ಪುಣ್ಯ ಸನ್ನಿಧಿಯೂ ಆಗಿದೆ.
ವಿಶೇಷ ವರದಿ : ಕೆ.ಎಸ್.ಮೂತಿ