ಸಿದ್ದಾಪುರ, ಅ. ೨೬ : ಅರೆಕಾಡು ಗ್ರಾಮದಲ್ಲಿ ಸರ್ಕಾರಿ ಹಾಗೂ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮರಕಡಿದು ಶನಿವಾರದಂದು ಸಾಗಾಟ ಮಾಡಿರುವ ಹಿನ್ನೆಲೆಯಲ್ಲಿ ಮರ ಸಾಗಾಟದ ಲಾರಿಯನ್ನು ತಡೆದಿದ್ದ ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕೆ ಮೂರ್ನಾಡು ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿದ್ದಾಪುರ ಪೊಲೀಸರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು ಗ್ರಾಮದಲ್ಲಿ ಇರುವ ಮೂರು ಎಕರೆ ಸರಕಾರಿ ಭೂಮಿ ಹಾಗೂ ಪಂಚಾಯತಿಗೆ ಸೇರಿದ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಸಿಲ್ವರ್ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅರೆಕಾಡು ಗ್ರಾಮಸ್ಥರು ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರದಂದು ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿ ಸಂಜು ನೇತೃತ್ವದಲ್ಲಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕಡಿದಿರುವ ಮರಗಳಿಗೆ ಸಂಖ್ಯೆಗಳನ್ನು ಹಾಕಿದರು.
ಇಬ್ಬರ ವಿರುದ್ಧ ಪ್ರಕರಣ ದಾಖಲು
ಅರೆಕಾಡು ಗ್ರಾಮದಲ್ಲಿ ಇರುವ ಸರ್ವೇ ನಂಬರ್ ೧೫/೭ರಲ್ಲಿ ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಧಿಕಾರಿಯವರು ಕಾಯ್ದಿರಿಸಿದ ೩ ಎಕರೆ ಸರ್ಕಾರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮರಗಳನ್ನು ಕಡಿದು ಸಾಗಾಟ ಮಾಡಿದ ಪ್ರಕರಣ ಸಂಬAಧ ಸಿದ್ದಾಪುರ ನಿವಾಸಿ ಮಂಜು ಹಾಗೂ ಲಾರಿ ಚಾಲಕ ಹೊಸ್ಕೇರಿ ಗ್ರಾಮದ ಹನೀಫ್ ಎಂಬವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರದ ಅಪರಾಧ ವಿಭಾಗದ ಠಾಣಾಧಿಕಾರಿ ಶಿವಣ್ಣ ಹಾಗೂ ಮುಖ್ಯಪೇದೆ ರವಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಬಳಿಕ ಸ್ಥಳೀಯರಿಂದ ಮಾಹಿತಿ ಪಡೆದರು.