ಐಗೂರು, ಅ. ೨೬: ವಾಹನ ಸಂಚರಿಸುವ ರಸ್ತೆಯು ನೀರು ತುಂಬಿದ ಕೆರೆಯಾಗಿ ಪರಿವರ್ತನೆಗೊಂಡಿದ್ದು, ವಾಹನ ಸವಾರರು ಆಗಾಗ ಬಿದ್ದು ಮಿಂದೇಳುವ ದೃಶ್ಯವು ಐಗೂರು-ಕಾಜೂರು ರಸ್ತೆಯಲ್ಲಿ ಕಂಡು ಬಂದಿದೆ.

ಐಗೂರಿನಿAದ ಕಾಜೂರು ಯಡವಾರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು ವಾಹನ ಸಂಚಾರವು ಸಂಚಕಾರವಾಗಿದೆ. ಮುಖ್ಯ ರಸ್ತೆ ಗುಂಡಿಗಳ ಮಧ್ಯೆ ಹುದುಗಿಕೊಂಡಿದೆ. ಎಡೆಬಿಡದೆ ಸುರಿದ ಮಳೆಯಿಂದ ಗುಂಡಿಯೊಳಗೆ ನೀರು ನಿಂತು ರಸ್ತೆ ಕೆರೆಯಾಗಿದೆ. ಇಲ್ಲಿಯ ದೇವಾಲಯಗಳಿಗೆ ಅಧಿಕ ಜನರು ಬರುವ ರಸ್ತೆಯು ಸೋಮವಾರಪೇಟೆ, ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಸಂಜೆಯಾಗುತ್ತಿದ್ದAತೆ ನೂತನವಾಗಿ ನಿರ್ಮಾಣವಾದ ವೈನ್ ಶಾಪಿಗೆ ಬರುವ ಗ್ರಾಹಕರ ವಾಹನಗಳ ಒತ್ತಡ ಅಧಿಕವಾಗಿದ್ದು, ವಾಹನ ಸವಾರರು ರಸ್ತೆಯ ಕೆಸರಿನೊಳಗೆ ಬಿದ್ದು ಮಿಂದೇಳುವ ದೃಶ್ಯವು ಕಂಡುಬರುತ್ತಿದೆ. ಈ ಹಿಂದೆ ಗುತ್ತಿಗೆದಾರರು ರಸ್ತೆಗೆ ಹಾಕಿದ್ದ ವೆಟ್‌ಮಿಕ್ಸ್ ಮತ್ತು ಜಲ್ಲಿಯ ಮಿಶ್ರಣವು ಮಳೆಗೆ ಕೊಚ್ಚಿ ಹೋಗಿದೆ. ಅಲ್ಲಲ್ಲಿ ರಸ್ತೆಗಳು ಕಿತ್ತು ಹೋಗಿದ್ದು ಗುಂಡಿಮಯವಾದ ರಸ್ತೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುವ ಆಟೋ ಚಾಲಕರು ಚಾಲನೆಯಲ್ಲಿ ಹರಸಾಹಸಪಡುತ್ತಿದ್ದು ಪ್ರಯಾಣಿಕರ ಜೀವವನ್ನು ಉಳಿಸಬೇಕಾಗಿದೆ ಎಂದು ಚಾಲಕ ಚಂದ್ರ ತಿಳಿಸಿದ್ದಾರೆ. ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಕಂಟಕವಾಗಿರುವ ರಸ್ತೆಯನ್ನು ಮಳೆ ಮುಗಿದ ತಕ್ಷಣ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.