ಮಡಿಕೇರಿ, ಅ. ೨೬: ಸಾಮಾಜಿಕ ಜಾಲತಾಣಗಳೇ ಹೆಚ್ಚು ಪ್ರಭಾವ ಬೀರುತ್ತಿರುವ ಇಂದಿನ ದಿನಗಳಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ಬಹಳ ವಿರಳ ಎನ್ನುವ ಮಾತಿದೆ. ಆದರೆ ಪ್ರಪಂಚಕ್ಕೆ ಬರವಣಿಗೆ ನೀಡುವ ಅಮೂಲ್ಯವಾದ ಸಾರವನ್ನು ಎಐ ಅಥವಾ ಗೂಗಲ್ ತಂತ್ರಜ್ಞಾನ ನೀಡಲು ಸಾಧ್ಯವಿಲ್ಲವೆಂದು ಸಾಹಿತಿ ಹಾಗೂ ಸಮಾಜ ಸೇವಕಿ ಮಾಳೇಟಿರ ಸೀತಮ್ಮ ವಿವೇಕ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ಅವರು ರಚಿಸಿರುವ ಕೊಡವ ಮಕ್ಕಡ ಕೂಟದ ೧೧೯ನೇ ಪುಸ್ತಕ ಬಯಂದ ಬಾಳ್ ಕೊಡವ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಯಾವುದೇ ನಿರೀಕ್ಷೆಗಳಿಲ್ಲದೆ ಸಾಹಿತ್ಯವನ್ನು ಸಮಾಜಕ್ಕೆ ಧಾರೆ ಎರೆಯಬೇಕು, ಆಗ ಸಮಾಜ ಅದನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸುತ್ತದೆ. ಸಮಾಜವನ್ನು ಬದಲಾಯಿಸುವ ಶಕ್ತಿ ಸಾಹಿತ್ಯಕ್ಕಿದೆ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ವೈಯಕ್ತಿಕ ಭಾವಗಳಿರುತ್ತವೆ. ಬರಹಗಾರರು ಅದಕ್ಕೆ ಅಕ್ಷರದ ರೂಪ ನೀಡಿ ಪುಸ್ತಕವನ್ನಾಗಿ ಹೊರ ತರುತ್ತಾರೆ. ಮೌಲ್ಯಯುತವಾದ ಪುಸ್ತಕಗಳನ್ನು ಓದುವ ಸಾಹಿತ್ಯಾಸಕ್ತರು ಸಮಾಜದಲ್ಲಿ ಇನ್ನೂ ಇದ್ದಾರೆ. ಬರಹಗಾರರು ಮತ್ತಷ್ಟು ಬೆಳೆಯಬೇಕು ಎಂದು ಕರೆ ನೀಡಿದರು. ದಾಖಲೆಯ ೧೧೯ ಪುಸ್ತಕಗಳನ್ನು ಹೊರ ತರುವ ಮೂಲಕ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ ಎಂದು ಸೀತಮ್ಮ ವಿವೇಕ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಬಯಂದ ಬಾಳ್’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸುಂಟಿಕೊಪ್ಪ ಕೊಡವ ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟೀರ ಸಿ. ಗಿರೀಶ್ ಅವರು ಯುವ ಬರಹಗಾರರು ಪುಸ್ತಕ ರಚನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಯುವ ಸಾಹಿತಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ, ಯುವ ಸಮೂಹ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಕೂಟದ ಮೂಲಕ ೨೦೨೪ನೇ ಇಸವಿಯಲ್ಲಿ ೨೭ ಮತ್ತು ೨೦೨೫ರಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸುಮಾರು ೧೩ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದೆ. ಇನ್ನೂ ಹಲವು ಪುಸ್ತಕಗಳು ಮುದ್ರಣ ಹಂತದಲ್ಲಿವೆ. ಸರಕಾರದ ಅನುದಾನವಿಲ್ಲದೆ ಅತೀ ಹೆಚ್ಚು ಪುಸ್ತಕ ಪ್ರಕಟಿಸಿದ ಹೆಗ್ಗಳಿಕೆ ನಮ್ಮದು ಎಂದರು. ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ೧೧೮ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ "ಗೌರಮ್ಮ ದತ್ತಿ ನಿಧಿ "ಪ್ರಶಸ್ತಿ ಲಭಿಸಿದೆ. ಐದು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಚೆಪ್ಪುಡಿರ ಎ.ಕಾರ್ಯಪ್ಪ ಅವರು ಬರೆದ ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ ಎಂಬ ದಾಖಲೀಕರಣ ಪುಸ್ತಕವನ್ನು ೧೫೦೦ ಪ್ರತಿಗಳನ್ನು ಮುದ್ರಿಸಿ ಕೊಡಗಿನಾದ್ಯಂತ ಶಾಲಾ-ಕಾಲೇಜು ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಿದೆ. ಕೊಡವ ಮಕ್ಕಡ ಕೂಟವು ಪುಸ್ತಕವನ್ನು ಪ್ರಕಟಣೆಗೊಳಿಸುವುದರ ಜೊತೆಯಲ್ಲಿ ಹಲವು ಸಮಾಜಮುಖಿ ಕೆಲಸದಲ್ಲಿ ಸಹ ತೊಡಗಿಸಿಕೊಂಡಿದೆ ಎಂದು ಬೊಳ್ಳಜಿರ ಅಯ್ಯಪ್ಪ ವಿವರಿಸಿದರು. ಸಮಾಜ ಸೇವಕರು ಹಾಗೂ ದಾನಿಗಳಾದ ಅವರೆಮಾದಂಡ ಶರಣ್ ಪೂಣಚ್ಚ ಅವರು ಮಾತನಾಡಿ, ಡಿಜಿಟಲ್ ಯುಗದ ಈ ದಿನಗಳಲ್ಲಿ ಬರಹಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಪುಸ್ತಕಗಳು ಶಾಶ್ವತವಾಗಿ ಉಳಿಯುವುದರಿಂದ ಮುಂದಿನ ಪೀಳಿಗೆಗೆ ಸಾಹಿತ್ಯ ಕ್ಷೇತ್ರ ಹೆಚ್ಚು ಸಹಕಾರಿಯಾಗಿದೆ. ಆದ್ದರಿಂದ ಸಾಹಿತ್ಯಾಸಕ್ತರು ಹಾಗೂ ಬರಹಗಾರರು ಹೆಚ್ಚಾಗಬೇಕು ಎಂದರು.

ಕೊಡವ ಮಕ್ಕಡ ಕೂಟ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೂಟದ ಕಾರ್ಯಚಟುವಟಿಕೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

"ಬಯಂದ ಬಾಳ್" ಕೊಡವ ಕೃತಿಯ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ಅವರು ಮಾತನಾಡಿ ಇದು ನನ್ನ ೩ನೇ ಕಾದಂಬರಿಯಾಗಿದ್ದು, ನಮ್ಮಂತಹ ಸಣ್ಣ ಬರಹಗಾರರಿಗೆ ಓದುಗರ ಪ್ರೋತ್ಸಾಹದ ಅಗತ್ಯವಿದೆ ಎಂದು ತಿಳಿಸಿದರು. ಕೊಡವ ಮಕ್ಕಡ ಕೂಟ ಹಾಗೂ ದಾನಿಗಳ ಸಹಕಾರವನ್ನು ಅವರು ಇದೇ ಸಂದರ್ಭ ಸ್ಮರಿಸಿಕೊಂಡರು. ಸಮಾಜ ಸೇವಕÀ ಚೀಯಕಪೂವಂಡ ಸಚಿನ್ ಪೂವಯ್ಯ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.