ಚೆಟ್ಟಳ್ಳಿ, ಅ. ೨೬ : ಕೊಡಗಿನ ಮೂಲ ಸಂಪ್ರದಾಯದಲ್ಲಿ ಗುರುಕಾರೋಣ, ಕಲ್ಯಾಟ ಅಜ್ಜಪ್ಪನಿಗೆ ವಿಶೇಷ ಸ್ಥಾನಮಾನವಿದೆ. ಪ್ರತಿಯೊಂದು ಕಾರ್ಯದಲ್ಲೂ ಗುರುಹಿರಿಯರನ್ನು ನೆನೆಯುವುದು ಪುರಾತನ ಕಾಲದಿಂದಲೂ ನಡೆದುಬಂದ ಸಂಪ್ರದಾಯ. ಕೈಮಡಗಳಲ್ಲಿ ಮೂಲಪುರುಷ ಅಜ್ಜಪ್ಪ, ತಾಯವ್ವನೆಂಬ ಕಲ್ಲಿನ ಕೆತ್ತನೆಗಳು ಸಾಕ್ಷಿಯಾಗಿವೆ.

ಕುಟುಂಬದ ಮೂಲ ಪುರುಷನ ಕಲ್ಲಿನ ಕೆತ್ತನೆಯನ್ನು ಕೈಮಡವೆಂಬ ಮೂಲನೆಲೆಯಲ್ಲಿ ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಹಿಂದೆ ವೀರಪುರುಷನ ನೆನಪಿಗಾಗಿ ಕೆತ್ತಿದ ವೀರಕಲ್ಲುಗಳು ಹೋರಾಡಿ ಮಡಿದ ಮಹಿಳೆಯ ನೆನಪಿಗಾಗಿ ಪ್ರತಿಷ್ಠಾಪಿಸಿದ ಮಹಾಸತಿ ಕಲ್ಲಿಗೂ ಬಾರೀ ವಿಶೇಷತೆ ಇದೆ ಹಾಗೂ ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಹೇಳುತ್ತಾರೆ. ಅದರಂತೆ ಕೊಡವರು ಮೂಲ ಪುರುಷನ್ನು ಅಜ್ಜಪ್ಪ ನೆಂದು ಮಹಿಳೆಯನ್ನು ಕಾರಣಚಿ ಎಂದೂ ಕೆತ್ತಿಡಲಾದರೆ ಕೊಡವರ ಮೂಲಪುರುಷ ಕಲ್ಯಾಟಜ್ಜಪ್ಪನ ಕಲ್ಲಿನ ಕೆತ್ತನೆಯನ್ನು ಕೆಲವೆಡೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಕೆಲವೆಡೆ ಕುಟುಂಬ ಸದಸ್ಯರು ಸತ್ತರೆ ಅವರ ನೆನೆಪಿಗಾಗಿ ಹೊಳೆಯಲ್ಲಿ ಒಂದು ಕಲ್ಲನ್ನು ತಂದು ಕಾರೋಣ ನೆಲೆಯಲ್ಲಿಟ್ಟರೆ ಮತ್ತೆ ಕೆಲವಡೆ ಬೆಳ್ಳಿಯ ಹಾಗು ಇತರೆ ಲೋಹದ ರೂಪವನ್ನು ಕೈಮಡದಲ್ಲಿಡುವರು.

ಚೆಟ್ಟಳ್ಳಿಯ ಕಂಡಕರೆಯ ಅನೀಶ್ ಎಂಬ ಯುವ ಕೆತ್ತನೆಯ ಕಲೆಗಾರ ಕೊಡವ ಜನಾಂಗದ ಅಜ್ಜಪ್ಪ ಕಾರಣಚಿ ಹಾಗೂ ಕಲ್ಯಾಟಜ್ಜಪ್ಪನ ಕೆತ್ತನೆಯನ್ನು ಮಾಡಿದ್ದು, ಕೊಡವ ಜನಾಂಗದ ಹಲವು ಕೈಮಡಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಉತ್ತಮ ಕಲ್ಲನ್ನು ಆಯ್ಕೆಮಾಡಿ ಪುರಾತನ ಕಲ್ಲಿನ ಮಾದರಿಯಂತೆ ಕಲ್ಲನ್ನು ವಿಘ್ನವಾಗದಂತೆ ಅತೀ ಸೂಕ್ಷö್ಮವಾಗಿ ಕೆತ್ತಲಾಗುತ್ತಿದ್ದು ಈಗಾಗಲೇ ಸುಮಾರು ೨೦ ಕಲ್ಲನ್ನು ಕೆತ್ತಲಾಗಿ ಕೆಲವನ್ನು ಪ್ರತಿಷ್ಠಾಪಿಸಿಲಾಗಿದೆ

ಪತ್ತಲೋದಿ ಎಂಬ ವಿಶೇಷ ಆಚರಣೆ

ಕುಲದೇವಿ ಕಾವೇರಿಯ ಮೂಲನೆಲೆ ತಲಕಾವೇರಿಯಲ್ಲಿ ಅಕ್ಟೋಬರ್ ೧೭ರ ತೀರ್ಥೋದ್ಬವದ ನಂತರ ಅಕ್ಟೋಬರ್ ೨೭ರ ಹತ್ತನೇ ದಿನ ಪವಿತ್ರದಿನವಾಗಿದ್ದು, ಕುಲದೇವಿ ಕಾವೇರಿಮಾತೆಯು ೧೦ ದಿನ ತನ್ನ ತವರಿನಲ್ಲಿ ಇರುವಳೆಂದು ಹೇಳಲಾಗುತ್ತಿದೆ. ಹತ್ತನೇ ದಿನವನ್ನು ಪತ್ತಲೋದಿ ವಿಶೇಷ ದಿನವೆಂದು ಆಚರಿಸಲಾಗುತ್ತಿದೆ. ಅಂದು ಆಯಾಯ ಕುಟುಂಬದವರು ಮದುವೆಮಾಡಿಕೊಟ್ಟ ಹೆಣ್ಣುಮಕ್ಕಳು ಐನ್‌ಮನೆಯಲ್ಲಿ ಸೇರಿ ವಿವಿಧ ಬಗೆಯ ಭೋಜವನ್ನು ತಯಾರಿಸಿ ನೆಲ್ಲಕ್ಕಿ ನಡುಬಾಡೆಯಲ್ಲಿ ಮೀದಿ ನೀರಿಟ್ಟರೆ ಮತ್ತೆ ಕೆಲವೆಡೆ ಕಾರೋಣನ ಮೂಲಸ್ಥಾನದಲ್ಲಿ ಬೇಡಿ ಕೊಳ್ಳುವುದು ಸಂಪ್ರದಾಯವಾಗಿ ನಡೆದುಬಂದಿದೆ.

-ಪುತ್ತರಿರ ಕರುಣ್ P