ಮಡಿಕೇರಿ, ಅ. ೨೬ : ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ನಡೆಸಿ ಬಡ ರೋಗಳಿಗೆÀ ಆಶಾಕಿರಣವಾಗಿರುವ ಸಿದ್ದಾಪುರದ ದಯಾ ರಿಯಾಬ್ಲಿಟೇಷನ್ ಟ್ರಸ್ಟ್, ತನಲ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಿದ ಡಯಾಲಿಸಿಸ್ ಕೇಂದ್ರವು ಆರ್ಥಿಕ ಸಂಕಷ್ಟದ ನಡುವೆಯೂ ತನ್ನ ೭ನೇ ವಸಂತಕ್ಕೆ ಕಾಲಿಟ್ಟಿದೆ.

ದಾನಿಗಳ ಸಹಕಾರದೊಂದಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ನಡೆಸುತ್ತಿರುವ ಸಂಸ್ಥೆ ನಿರ್ಗತಿಕರಿಗೆ ಉಚಿತ ಚಿಕಿತ್ಸೆಯನ್ನು ನೀಡಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದ್ದು ಸಂಸ್ಥೆಯು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ದಯಾ ರಿಯಾಬ್ಲಿಟೇಷನ್ ಟ್ರಸ್ಟ್ ಕಳೆದ ೬ ವರ್ಷದಲ್ಲಿ ಸುಮಾರು ೩೪ ರೋಗಿಗಳಿಗೆ ೮೨೦೮ ಡಯಾಲಿಸಿಸ್ ಸೇವೆಯನ್ನು ನೀಡಿದ್ದು ೭ ಮಂದಿ ಬಡ ನಿರ್ಗತಿಕ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆ ನೀಡುತ್ತಿದೆ.

ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಸಂಸ್ಥೆಗೆ ಯುವಕರ ತಂಡವು ಬಿರಿಯಾನಿ ಚಾಲೆಂಜ್ ಎಂಬ ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಕಳೆದ ಎರಡು ವರ್ಷಗಳಿಂದ ಕೈ ಜೋಡಿಸಿದ್ದು ಈ ಹಿಂದೆ ಕಾರ್ಯಕ್ರಮ ಮಾಡುವ ಮೂಲಕ ಸಂಸ್ಥೆಯ ಸಾಲ ತೀರಿಸುವುದರೊಂದಿಗೆ ರೋಗಿಯೊಬ್ಬರಿಗೆ ಕನಿಷ್ಟ ೫೦೦ ರಿಂದ ಗರಿಷ್ಠ ೯೦೦ರೂಗಳ ಚಿಕಿತ್ಸೆ ವೆಚ್ಚವನ್ನು ಕೇವಲ ೫೦೦ ರೂ.ಗೆ ನೀಡುವ ಮೂಲಕ ನೆರವಾಗಿದೆ. ಈ ಬಾರಿ ಸುಮಾರು ೧೨ ಸಾವಿರ ಬಿರಿಯಾನಿ ಮಾರಾಟ ಮಾಡುವ ಮೂಲಕ, ಹೆಚ್ಚಿನ ಹಣ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಉಚಿತವಾಗಿ ಡಯಾಲಿಸಿಸ್ ನೀಡುವ ಯೋಜನೆ ರೂಪಿಸಲಾಗಿದ್ದು ಇದಕ್ಕೆ ಸಿದ್ದಾಪುರ ಭಾಗದಲ್ಲಿ ಸಂಘ-ಸAಸ್ಥೆಗಳ ಸಹಕಾರ ವ್ಯಕ್ತವಾಗಿದೆ.

ಸಿಬ್ಬಂದಿಗಳ ವೇತನ, ವಿದ್ಯುತ್, ಔಷಧೋಪಚಾರ ಸೇರಿದಂತೆ ಪ್ರತಿ ತಿಂಗಳು ಡಯಾಲಿಸಿಸ್ ಕೇಂದ್ರ ನಿರ್ವಹಣೆಗೆ ೧.೭೫ ಲಕ್ಷದಿಂದ ೨ ಲಕ್ಷ ವೆಚ್ಚವಾಗುತ್ತಿದ್ದು, ಪ್ರಸ್ತುತ ೫ ಲಕ್ಷ ಸಾಲವನ್ನು ಹೊಂದಿದೆ.

ಈಗಾಗಲೇ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದ ಕಾರ್ಗಿಲ್ ಬಾಯ್ಸ್, ನೈಮ, ಹಿರಾ, ಚಾಲಿಯಂ ಬಾಯ್ಸ್, ಯೂತ್ ಹೆಲ್ತ್ ಕೇರ್ ಗೂಡುಗದ್ದೆ, ಮಿಮ್ಸ್, ವಿ ಸೆವೆನ್ ಯುವಕ ಸಂಘ, ಸಿದ್ಧಿವಿನಾಯಕ ಮಿತ್ರ ಮಂಡಳಿ, ರಾಯಲ್ಸ್ ಯುವಕ ಸಂಘ, ವಿನಾಯಕ ಮಿತ್ರ ಮಂಡಳಿ, ಕ್ಲಾಸಿಕ್ ಯುವಕ ಸಂಘ, ಸಿಟಿ ಬಾಯ್ಸ್, ಎಸ್.ಕೆ ಎಸ್ ಎಸ್ ಎಫ್ ಹಾಗೂ ಎಸ್ ಎಸ್ ಎಫ್ ಸಂಘಟನೆಗಳು ಬಿರಿಯಾನಿ ಚಾಲೆಂಜ್ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ.

ಏನಿದು ಬಿರಿಯಾನಿ ಚಾಲೆಂಜ್?

ಸAಸ್ಥೆಯನ್ನು ಆರ್ಥಿಕ ಸಂಕಷ್ಟದಿAದ ಪಾರುಮಾಡುವ ನಿಟ್ಟಿನಲ್ಲಿ ಬಿರಿಯಾನಿ ಚಾಲೆಂಜ್ ಎಂಬ ವಿನೂತನ ಪ್ರಯೋಗವನ್ನು ಮಾಡಲಾಗುತ್ತದೆ.

ದಾನಿಗಳಿಂದ ಬಿರಿಯಾನಿ ತಯಾರಿಕೆಗೆ ಬೇಕಾದ ಅಕ್ಕಿ, ಮಾಂಸ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸಂಗ್ರಹಿಸಿ ಬಿರಿಯಾನಿ ತಯಾರಿಸಲಾಗುತ್ತದೆ. ನಂತರ ಇದನ್ನು ಸಂಘ ಸಂಸ್ಥೆಗಳು, ಕಚೇರಿಗಳು, ಮನೆಗಳಿಗೆ ಮಾರಾಟ ಮಾಡಿ ಬಂದ ಹಣವನ್ನು ಸಂಸ್ಥೆಗೆ ನೀಡಲಾಗುತ್ತಿದೆ. ೧೨ ಸಾವಿರಕ್ಕೂ ಅಧಿಕ ಬಿರಿಯಾನಿ ಮಾರಾಟ ಮಾಡುವ ನಿರೀಕ್ಷೆ ಇದ್ದು, ಒಂದು ಬಿರಿಯಾನಿಗೆ ೧೨೦ ರೂ. ನಿಗದಿಪಡಿಸಲಾಗಿದೆ. ತಾ. ೨೯ರಂದು ಬಿರಿಯಾನಿ ಚಾಲೆಂಜ್ ನಡೆಯಲಿದೆ.

ರೂ. ೧೫೦೦ ರಿಂದ ೨ ಸಾವಿರ ವೆಚ್ಚವಾಗುವ ಡಯಾಲಿಸಿಸ್ ಚಿಕಿತ್ಸೆಯನ್ನು ನಮ್ಮ ಸಂಸ್ಥೆ ಈ ಹಿಂದೆ ೯೦೦ ರೂ. ಗೆ ನೀಡುತ್ತಿತ್ತು. ಇದೀಗ ಬಿರಿಯಾನಿ ಚಾಲೆಂಜ್ ಏರ್ಪಡಿಸುವ ಮೂಲಕ ಆರ್ಥಿಕ ನೆರವಿನಿಂದಾಗಿ ಪ್ರಸ್ತುತ ೫೦೦ ರೂ.ಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾಸಿಕ ೨ ಲಕ್ಷದಷ್ಟು ನಿರ್ವಹಣಾ ವೆಚ್ಚವಾಗುತ್ತಿದೆ. ಸಂಸ್ಥೆ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದೆ. ಈ ಬಾರಿ ಬಿರಿಯಾನಿ ಚಾಲೆಂಜ್ ಮೂಲಕ ಹೆಚ್ಚಿನ ಹಣ ಸಂಗ್ರಹವಾದಲ್ಲಿ ಮುಂದಿನ ದಿನಗಳಲ್ಲಿ ಉಚಿತ ಸೇವೆಯ ಚಿಂತನೆ ಇದೆ ಎಂದು ದಯಾ ರಿಯಾಬ್ಲಿಟೇಷನ್ ಟ್ರಸ್ಟ್ನ ವ್ಯವಸ್ಥಾಪಕ ನಿತೀಶ್ ತಿಳಿಸಿದ್ದಾರೆ.