ಮಡಿಕೇರಿ, ಅ. ೨೭: ಕೊಡವ ಕುಟುಂಬಗಳ ನಡುವಿನ ೨೬ನೆಯ ವರ್ಷದ ಕೌಟುಂಬಿಕ ಹಾಕಿ ಉತ್ಸವವನ್ನು ಈ ಬಾರಿ ಚೇನಂಡ ಕುಟುಂಬಸ್ಥರು ಆಯೋಜಿಸುತ್ತಿದ್ದು, ಹಾಕಿ ಉತ್ಸವದ ಲಾಂಛನವನ್ನು ರಾಜ್ಯದ ಸಿದ್ದರಾಮಯ್ಯ ಅವರು ನವೆಂಬರ್ ೨ರಂದು ಬೆಂಗಳೂರಿನ ಕೃಷ್ಣ ಸಭಾಂಗಣದಲ್ಲಿ ಅನಾವರಣಗೊಳಿಸಲಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೇನಂಡ ಕಪ್ ಹಾಕಿ ಉತ್ಸವ ಸಮಿತಿ ಪದಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದರು. ಉತ್ಸವ ಸಮಿತಿಯ ಪದಾಧಿಕಾರಿ ಚೇನಂಡ ಬಬಿತಾ ಅಯ್ಯಪ್ಪ ಹಾಗೂ ಇತರರು ಚೇನಂಡ ಕಪ್‌ನ ಕುರಿತಾಗಿ ವಿವರವಿತ್ತರು.

ಕೌಟುಂಬಿಕ ಹಾಕಿ ಉತ್ಸವವು ರಜತ ಮಹೋತ್ಸವ ಕಂಡಿದ್ದು ಗಿನ್ನಿಸ್ ದಾಖಲೆ, ವರ್ಲ್ಡ್ ಬುಕ್ ರೆಕಾರ್ಡ್ಸ್ನಲ್ಲೂ ಸ್ಥಾನ ಪಡೆದಿದೆ. ಇದೀಗ ಮುಂದಿನ ವರ್ಷದ ಹಾಕಿ ಉತ್ಸವ ಆಯೋಜನೆ ಚೇನಂಡ ಕುಟುಂಬಕ್ಕೆ ಸವಾಲು ಆಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈಗಾಗಲೇ ಉತ್ಸವದ ಲಾಂಛನವನ್ನು ಸಿದ್ಧಪಡಿಸಲಾಗಿದ್ದು, ನವೆಂಬರ್ ೨ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಲಿದ್ದಾರೆ. ಈ ಸಂದರ್ಭ ವೀರಾಜಪೇಟೆ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಅವರುಗಳು ಉಪಸ್ಥಿತರಿರುವರು. ಇದಾದ ಬಳಿಕ ಡಿಸೆಂಬರ್ ೨೫ರಂದು ನಾಪೋಕ್ಲುವಿನಲ್ಲಿ ಸಮಾರಂಭ ಹಮ್ಮಿಕೊಂಡು ಆ ದಿನ ಚೇನಂಡ ಕುಟುಂಬ ಆಯೋಜಿಸುವ ಹಾಕಿ ಉತ್ಸವದ ಕಾರ್ಯಕ್ರಮಗಳ ವಿವರಗಳನ್ನು ಲೋಕಾರ್ಪಣೆ ಮಾಡಲಾಗುವುದು. ಮುಂದಿನ ಏಪ್ರಿಲ್ ೫ ರಿಂದ ಮೇ ೨ರ ತನಕ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ ಜರುಗಲಿದೆ ಎಂದು ಅವರುಗಳು ತಿಳಿಸಿದರು.

ಈ ಬಾರಿ ವಿಶೇಷವಾಗಿ ಜನವರಿ ತಿಂಗಳಿನಲ್ಲಿ ಪ್ರಾಥಮಿಕ ಶಾಲೆಯಿಂದಲೇ ಹಾಕಿ ಆಟ ಎಂಬ ಕಾರ್ಯಕ್ರಮದಡಿ ಜಿಲ್ಲಾಮಟ್ಟದ ಬಾಲಕ ಬಾಲಕಿಯರ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ತಂಡವಿಲ್ಲದಿದ್ದರೂ ಆಡಲು ಇಚ್ಛೆಯುಳ್ಳ ಮಕ್ಕಳಿಗೆ ಹಾಕಿ ಆಡಲು ಅವಕಾಶ ಮಾಡಿಕೊಡುವುದು ಚಿಂತನೆಯಾಗಿದೆ. ಇಲ್ಲಿ ಆಯ್ಕೆಯಾದ ಯುವ ಹಾಕಿಪಟುಗಳಿಗೆ ನಾಪೋಕ್ಲುವಿನಲ್ಲಿ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಉನ್ನತ ಮಟ್ಟದ ತರಬೇತಿಯನ್ನು ನಿಪುಣ ತರಬೇತುದಾರರಿಂದ ಒದಗಿಸಲಾಗುವುದು. ಈ ಪ್ರಯತ್ನದ ಮೂಲಕ ಭಾವೀ ರಾಷ್ಟ್ರೀಯ ಮಟ್ಟದ ಆಟಗಾರರನ್ನು ರೂಪಿಸಲು ಕುಟುಂಬ ಪ್ರಯತ್ನ ನಡೆಸಲಿದೆ. ಜೆನಂಡ ಕುಟುಂಬದ ಉತ್ಸವಕ್ಕೆ ಕೊಡವ ಹಾಕಿ ಅಕಾಡೆಮಿ ಅಗತ್ಯ ಬೆಂಬಲ ನೀಡುತ್ತಿದೆ ಎಂದು ಅವರು ವಿವರಿಸಿದರು.

ಏಪ್ರಿಲ್ ೫ರಿಂದ ಮೇ ೨ರ ತನಕ ಈ ಬಾರಿಯ ಉತ್ಸವ ನಿಗದಿಯಾಗಿದ್ದು, ಈ ಅವಧಿಯಲ್ಲಿ ಮೈದಾನದ ಉಪಲಬ್ದತೆ, ಕ್ರೀಡಾಪಟುಗಳ ಭಾಗವಹಿಸುವಿಕೆ, ಪ್ರೇಕ್ಷಕರು, ಪ್ರವಾಸಿಗರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಇನ್ನಿತರ ಕ್ರೀಡಾಕೂಟಗಳನ್ನು ಈ ಸಂದರ್ಭ ನಡೆಸದಿರುವಂತೆ ಜಿಲ್ಲೆಯ ಸಮಸ್ತ ಜನತೆಯಲ್ಲಿ ಹಾಗೂ ಕ್ರೀಡಾ ಆಯೋಜಕರನ್ನು ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುವುದಾಗಿಯೂ ಪ್ರಮುಖರು ಹೇಳಿದರು.

ಗೋಷ್ಠಿಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಸಿ.ಪಿ ಕರುಂಬಯ್ಯ, ಕಾರ್ಯಾಧ್ಯಕ್ಷ ಸಿ.ಟಿ ಚಂಗಪ್ಪ, ಕಾರ್ಯದರ್ಶಿ ಸಿ.ಎಸ್ ಮಾದಯ್ಯ, ಶ್ಯಾಮಲ ಚಂಗಪ್ಪ, ನಮೃತ ಅಯ್ಯಣ್ಣ ಉಪಸ್ಥಿತರಿದ್ದರು.