ಮಡಿಕೇರಿ, ಅ. ೩೦: ಜಿಲ್ಲಾ ಕೇಂದ್ರ ಮಡಿಕೇರಿ ನಗರದ ಪ್ರಮುಖ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಹೊಂದಿರುವ ನಿವೇಶನದಲ್ಲಿ ಇದೀಗ ಕಾಂಗ್ರೆಸ್ ಭವನ ನಿರ್ಮಾಣ ಕಾರ್ಯಕ್ಕೆ ಜಿಲ್ಲಾ ಕಾಂಗ್ರೆಸ್ ಮುಂದಾಗಿದೆ. ಈ ಹಿಂದೆ ಜನತಾದಳ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಈ ನಿವೇಶನಕ್ಕಾಗಿ ವ್ಯಾಜ್ಯ ಏರ್ಪಟ್ಟಿತ್ತು. ನಂತರದಲ್ಲಿ ಜಿಲ್ಲಾ ನ್ಯಾಯಾಲಯದ ಮೂಲಕ ನಿವೇಶನದ ಮಾಲೀಕತ್ವ ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿತ್ತು. ಇದಾಗಿ ಕೆಲವು ವರ್ಷಗಳು ಕಳೆದರೂ ಈ ನಿವೇಶನ ಖಾಲಿಯಾಗಿಯೇ ಬಿದ್ದಿತ್ತು.
ಮಡಿಕೇರಿಯ ಡಿ.ಸಿ.ಸಿ. ಬ್ಯಾಂಕ್ ಕಟ್ಟಡ ಹಾಗೂ ಕಾಫಿಕೃಪಾ ಕಟ್ಟಡದ ಒತ್ತಿನಲ್ಲಿ ಈ ನಿವೇಶನವಿದೆ. ಇದೀಗ ಕೊಡಗು ಜಿಲ್ಲಾ ಕಾಂಗ್ರೆಸ್ ಹಾಗೂ ಭವನ ನಿರ್ಮಾಣ ಸಮಿತಿ ಆಶ್ರಯದಲ್ಲಿ ತಾ. ೧ ರಂದು (ನಾಳೆ) ಬೆಳಿಗ್ಗೆ ೧೧ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜ್ ಅವರು ಶಿಲಾನ್ಯಾಸ ನೆರವೇರಿಸಲಿದ್ದು, ಶಾಸಕದ್ವಯರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸೇರಿದಂತೆ ಹಿರಿಯ ಕಾಂಗ್ರೆಸಿಗರು ಪಾಲ್ಗೊಳ್ಳಲಿದ್ದಾರೆ.
ಭವನ ನಿರ್ಮಾಣಕ್ಕಾಗಿ ಧರ್ಮಜ ಉತ್ತಪ್ಪ ಅಧ್ಯಕ್ಷತೆಯಲ್ಲಿ ೧೨ ಮಂದಿಯನ್ನೊಳಗೊAಡ ಟ್ರಸ್ಟ್ಅನ್ನು ರಚಿಸಲಾಗಿದೆ. ಅಲ್ಲದೆ ಜಿಲ್ಲೆಯ ಹಲವೆಡೆಗಳಿಂದ ಹಲವರನ್ನು ಸಲಹಾ ಸಮಿತಿ ಸದಸ್ಯರುಗಳಾಗಿಯೂ ಭವನ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿದೆ. ಅಂದಾಜು ರೂ. ೩.೫೦ ಕೋಟಿ ವೆಚ್ಚದಲ್ಲಿ ಮೂರು ಮಹಡಿಯ ಭವನ ನಿರ್ಮಾಣವಾಗಲಿದೆ. ಒಂದು ವರ್ಷದ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿರುವುದಾಗಿ ಧರ್ಮಜ ಉತ್ತಪ್ಪ ಅವರು ತಿಳಿಸಿದ್ದಾರೆ.