ಕೂಡಿಗೆ, ಅ. ೩೧: ಕುಶಾಲನಗರದಲ್ಲಿರುವ ಎಂ.ಜಿ.ಎA. ಪದವಿ ಕಾಲೇಜಿನಲ್ಲಿ ಕಲಾರಂಭ-೨೦೨೫ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾಸಂಸ್ಥೆಯ ಕಚೇರಿಯ ಅಧೀಕ್ಷಕ ಮಹೇಶ್ ಅಮೀನ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಞಾನ ಭಾರತಿ ಶಾಲೆ, ಆಕಾಶವಾಣಿ ಕಲಾವಿದರಾದ ಶೋಭ ಭಟ್ ನೆರವೇರಿಸಿ ನಂತರ ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ವಇಚ್ಛೆಯಿಂದ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಹೊರಹಾಕಬೇಕು ಹಾಗೂ ಜಗತ್ತಿನಾದ್ಯಂತ ತಮ್ಮ ಪ್ರತಿಭೆ ಗುರುತಿಸಿಕೊಳ್ಳುವಂತೆ ಆಗಲಿ ಎಂದು ಆಶಿಸಿದರು.
ಅತಿಥಿಯಾಗಿ ಆಗಮಿಸಿದ್ದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲೆ ಕ್ಲಾರ ರೇಷ್ಮಾ ಮಾತನಾಡಿದರು. ಪದವಿ ಕಾಲೇಜು ಪ್ರಾಂಶುಪಾಲೆ ಟಿ.ಎ. ಲಿಖಿತಾ ಪ್ರಾಸ್ತಾವಿಕ ನುಡಿಯಾಡಿದರು. ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಪದವಿ ವಿದ್ಯಾರ್ಥಿಗಳಿಗೆ ನೃತ್ಯ, ಹಾಡು, ಅಡುಗೆ ಸ್ಪರ್ಧೆ, ಮೆಹಂದಿ, ಕಸದಿಂದ ರಸ, ಪ್ರಬಂಧ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳು ಜರುಗುತ್ತವೆ. ಕಾರ್ಯಕ್ರಮದ ವೇದಿಕೆಯಲ್ಲಿ ಎಂಜಿಎA ಕಾಲೇಜು ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ, ಪದವಿ ವಿದ್ಯಾರ್ಥಿಗಳು ಹಾಜರಿದ್ದರು. ಉಪನ್ಯಾಸಕ ದೇವೇಂದ್ರ ನಿರೂಪಿಸಿ, ಸ್ವಾಗತಿಸಿ, ಮಂಜೇಶ್ ವಂದಿಸಿದರು.