ಕೂಡಿಗೆ,ಅ. ೩೧ : ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ , ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯು ಕುಶಾಲನಗರ ಸುವರ್ಣ ಮಹೋತ್ಸವ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದು ನೂತನ ಆಡಳಿತ ಮಂಡಳಿಗೆ ೮ ನಿರ್ದೇಶಕರಾಗಿ ಚುನಾಯಿತಗೊಂಡರು.

ಚುನಾವಣಾ ಪ್ರಕ್ರಿಯೆಯು ಮುಗಿದ ನಂತರ ಮತ ಎಣಿಕೆಯ ಕಾರ್ಯವು ಸಹಕಾರ ಸಂಘದ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿಯ ಸಮ್ಮುಖದಲ್ಲಿ ನಡೆಯಿತು. ಹೆಬ್ಬಾಲೆ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹೆಚ್. ಬಿ. ಚಂದ್ರಪ್ಪ, ಹಿಂದುಳಿದ ವರ್ಗ ಪ್ರವರ್ಗ ‘ಎ” ಕ್ಷೇತ್ರದಿಂದ ಹೆಚ್. ಎನ್. ಮಹದೇವ, ಮಹಿಳಾ ಮೀಸಲು ಕ್ಷೇತ್ರದಿಂದ ಹೆಚ್.ಟಿ. ಚಂದ್ರಕಲಾ, ಅಯ್ಕೆಗೊಂಡರು.

ಕುಶಾಲನಗರ ಬ್ಲಾಕ್ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಬಿ.ಸಿ. ಮಲ್ಲಿಕಾರ್ಜುನ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ನಂದಕುಮಾರ್, ಮಹಿಳಾ ಮೀಸಲು ಕ್ಷೇತ್ರದಿಂದ ಬೊಳ್ಳಚಂಡ ಪಾರ್ವತಿ ಮುತ್ತಣ್ಣ ಆಯ್ಕೆಗೊಂಡರು.

ಕುಶಾಲನಗರ “ಎ” ತರಗತಿ ಕ್ಷೇತ್ರದಿಂದ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳಾದ ಹೆಚ್.ಜೆ ಶರತ್, ನಂಜರಾಯಪಟ್ಟಣ “ಎ” ತರಗತಿ ಬ್ಲಾಕ್‌ನಿಂದ ಕೆ.ಎಂ. ಪ್ರಸನ್ನ ಚುನಾಯಿತಗೊಂಡರು ಎಂದು ಚುನಾವಣಾ ಅಧಿಕಾರಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.

ಚುನಾವಣಾ ಕಣದಲ್ಲಿ ಮೂರು ಕ್ಷೇತ್ರಗಳಿಂದ ೨೦. ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ೧೨ ಆಡಳಿತ ಮಂಡಳಿಯ ನಿರ್ದೇಶಕ ಪೈಕಿ ಸುಂಟಿಕೊಪ್ಪ ಕ್ಷೇತ್ರದಿಂದ ೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಹಾಯಕ ಚುನಾವಣಾಧಿಕಾರಿಯಾಗಿ ಸುದೀಪ, ಸಂಘದ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಕಾರ್ಯ ನಿರ್ವಹಿಸಿದರು.