ಪೊನ್ನಂಪೇಟೆ, ಅ. ೩೧: ಪೊನ್ನಂಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು ಇಲ್ಲಿನ ಟಿ.ಆರ್. ರಸ್ತೆಯಲ್ಲಿ ಮಗು ಮತ್ತು ಮಹಿಳೆಯೊಬ್ಬರಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ.
ಬೀದಿ ನಾಯಿಗಳು ರಸ್ತೆಯಲ್ಲಿ ಗುಂಪು ಗುಂಪಾಗಿ ಓಡಾಡುತ್ತಿದ್ದು ಮಕ್ಕಳು ಹಾಗೂ ನಾಗರೀಕರು ನಡೆದಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಪೊನ್ನಂಪೇಟೆ ವಿವಿಧ ಭಾಗಗಳಲ್ಲಿ ಹಲವರಿಗೆ ನಾಯಿ ಕಚ್ಚಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಇಂದು ಅಂಗನವಾಡಿಗೆ ತೆರಳುತ್ತಿದ್ದ ಸಣ್ಣ ಮಗುವಿಗೆ ನಾಯಿ ಕಚ್ಚಿದ ಸುದ್ದಿ ಹರಡುತ್ತಿದ್ದಂತೆ, ಕೆಲವು ದಿನದ ಹಿಂದೆ ನಮಗೂ ಕೂಡ ನಾಯಿ ಕಚ್ಚಿತ್ತು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಇಂದು ತೊರೆಬೀದಿಯ ಮಹಿಳೆಯೊಬ್ಬರಿಗೆ ಬೀದಿನಾಯಿ ಕಚ್ಚಿವೆ. ಬೀದಿ ನಾಯಿಗಳಲ್ಲಿ ಒಂದು ನಾಯಿಗೆ ಹುಚ್ಚು ಹಿಡಿದಿರುವುದರಿಂದ ಆ ನಾಯಿ ಎಲ್ಲರಿಗೂ ಕಚ್ಚುತ್ತಿದೆ ಎಂದು ಹೇಳಲಾಗುತ್ತಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಬೀದಿ ನಾಯಿಗಳಿಂದ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.